ಹುಬ್ಬಳ್ಳಿ : ಸಾಮಾನ್ಯವಾಗಿ ಮಹಿಳೆಯರು ಮನೆಕೆಲಸ ನೋಡಿಕೊಳ್ಳುವುದು ಮತ್ತು ಪುರುಷರು ಹೊರಗಡೆ ಹೋಗಿ ದುಡಿದು ಮನೆ ನಿಭಾಯಿಸುವುದು ಲೋಕ ರೂಢಿ. ಆದರೆ, ಇದೀಗ ಮಹಿಳೆ ಬರೀ ಮನೆಯ ನಾಲ್ಕು ಗೋಡೆಯ ಒಳಗೆ ಸೀಮಿತವಾಗಿಲ್ಲ. ಸಾಧನೆ ಎಂದರೆ ಅದು ತನ್ನ ಕುಟುಂಬ ನಿರ್ವಹಣೆಯಿಂದಲೇ ಆರಂಭವಾಗಲಿದೆ. ಇದೇ ರೀತಿ ಹುಬ್ಬಳ್ಳಿಯ ನಿವಾಸಿಯೊಬ್ಬರು ಈಗ ಪುರುಷ ಸಮಾನವಾಗಿ ದುಡಿಮೆ ಮಾಡಿ ತನ್ನ ಕುಟುಂಬ ನಿರ್ವಹಣೆಯಲ್ಲಿ ಆಸರೆಯಾಗಿದ್ದಾರೆ.
ಹೀಗೆ ಖಾಕಿ ಡ್ರೆಸ್ ಹಾಕಿಕೊಂಡು ಆಟೋ ಓಡಿಸುತ್ತಿರುವ ಆಟೋ ಚಾಲಕಿ ಹೆಸರು ಮಂಜುಳಾ ಹಿರೇಮಠ ಅಂತಾ. ಹುಬ್ಬಳ್ಳಿಯ ಈಶ್ವರ ನಗರದ ಹೂಗಾರ ಪ್ಲಾಟ್‌ನ ನಿವಾಸಿ. ಈಕೆ ಕಳೆದ ಐದು-ಆರು ವರ್ಷಗಳಿಂದ ಹುಬ್ಬಳ್ಳಿ ನಗರದಲ್ಲಿ ಆಟೋ ಓಡಿಸಿ ಜೀವನ ನಡೆಸುತ್ತಾ ಇದ್ದಾರೆ. ಇದಕ್ಕೆಲ್ಲಾ ಕಾರಣ ಅವರ ಕುಟುಂಬವಂತೆ. ತಮ್ಮ ಮಗಳ ಪಾಲನೆ ಪೋಷಣೆ ಹಾಗೂ ಪತಿಯ ಅನಾರೋಗ್ಯದ ಕಾರಣದಿಂದ ಮಂಜುಳಾಗೆ ಸಂಕಷ್ಟದ ದಿನ ಎದುರಾಗಿತ್ತು. ಆರ್ಥಿಕ ಹೊರೆ ಅವರನ್ನು ಕಾಡಲಾರಂಭಿಸಿತು. ಈ ನಡುವೆ ಸಂಕಷ್ಟಗಳಿಗೆ ಎದೆಗುಂದದ ಮಂಜುಳಾ 2017 ರಿಂದ ಆಟೋ ಓಡಿಸಿಕೊಂಡು ಸಂಸಾರದ ಬಂಡಿಯನ್ನು ಎಳೆಯುತ್ತಿದ್ದಾರೆ.
ಇನ್ನು ಮಂಜುಳಾ ಓದಿದ್ದು ಹತ್ತನೇ ತರಗತಿ, ಪತಿ ಸಿದ್ದರಾಮಯ್ಯ ಕೂಡ ಆಟೋ ಚಾಲನೆ ಮಾಡುತ್ತಿದ್ದರು. ಆದರೆ, ಮೂರು ವರ್ಷಗಳ ಹಿಂದೆ ಸಿದ್ದಲಿಂಗಯ್ಯ ಅವರಿಗೆ ಅಪಘಾತವಾಗಿ ಕಾಲು ಮುರಿದುಕೊಂಡಿದ್ದರು. ಹೀಗಾಗಿ ಮಂಜುಳಾ ಹಿರೇಮಠ ತಮ್ಮ ಮಗಳ ಪೋಷಣೆ ಮತ್ತು ಜೀವನ ನಿರ್ವಹಣೆಗೆ ಆಟೋ ಚಾಲನೆಯನ್ನು ನಂಬಿಕೊಂಡು ಜೀವನದ ಬಂಡಿ ನಡೆಸುತ್ತಿದ್ದಾರೆ.
ಬಡತನ ಮತ್ತು ಇಡೀ ಕುಟುಂಬದ ಹೊಣೆಗಾರಿಕೆಯನ್ನು ಪ್ರತಿ ಮಹಿಳೆಯೂ ಸಮರ್ಥವಾಗಿ ಎದುರಿಸಬಲ್ಲಳು ಎಂಬುದಕ್ಕೆ ಮಂಜುಳಾ ಹಿರೇಮಠ ನಿದರ್ಶನ.