ಶಿವಮೊಗ್ಗ:ವಿರೋಧಪಕ್ಷದ ನಾಯಕ ನಾನು ಎಂಬುದನ್ನು ಮರೆತು ಸಿದ್ದರಾಮಯ್ಯ ಅವರು ಆರ್ ಎಸ್‌ಎಸ್ ಅನ್ನು ನಪುಂಸಕ ಸಂಘ ಎಂದು ಕರೆದಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತು. ಅದಕ್ಕಾಗಿ ಕಾಂಗ್ರೆಸ್ ನಪುಂಸಕವಾಗಿದೆ ಆರ್ ಎಸ್ ಎಸ್ ಹುಲಿ ಸಿಂಹಗಳಂತ ದೇಶ ಭಕ್ತರನ್ನು ತಯಾರಿಸುವ ಸಂಘಟನೆ. ಸಿದ್ದರಾಮಯ್ಯ ಅವರು ನನಗೆ ಮೆದುಳಿಗೆ ನಾಲಿಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಕರೆದಾಗ ನನ್ನನ್ನು ಪ್ರಾಣಿ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಮೋದಿ, ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ಬೈದಿದ್ದರು. ಈಗ ಹೇಳಲಿ ಸಿದ್ದರಾಮಯ್ಯ ಅವರು ಯಾವಾಗ ಪ್ರಾಣಿಯಾದರು ಎಂದರು.
ಇನ್ನು, ಸಿಂಹದಮರಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ್ದಾರೆ. ನಪುಂಸಕರಾದ ಕಾಂಗ್ರೆಸ್ಸಿಗರು 75 ವರ್ಷ ಅಧಿಕಾರ ನಡೆಸಿದರೂ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಲಿಲ್ಲ. ಸಿದ್ದರಾಮಯ್ಯ ಅವರನ್ನು ಪ್ರಾಣಿಗೆ ಹೋಲಿಸಿದರೇ ಆ ಪ್ರಾಣಿಗೆ ಅವಮಾನ ಮಾಡಿದಂತೆ. ದೇಶದೊಳಗೆ ಬ್ರಿಟೀಷರು 600 ವರ್ಷದ ಹಿಂದೆ ಬರಲು ಆರ್ ಎಸ್ ಎಸ್ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನು ನೋಡಿದರೆ ಸಿದ್ದರಾಮಯ್ಯ ಅವರ ತಲೆಯಲ್ಲಿ ಸಗಣಿ ಬಿಟ್ಟರೆ ಏನೂ ಇಲ್ಲ ಎಂಬುದು ತಿಳಿಯುತ್ತದೆ. ಆರ್ ಎಸ್ ಎಸ್ ಸಿಂಹ, ಹುಲಿ ಮರಿಗಳಿರುವ ಸಂಘಟನೆಗಳು. ಈಗ ಆರ್ ಎಸ್‌ಎಸ್ ನವರು ತಡೆದುಕೊಳ್ಳುವ ಸ್ಥಿತಿಯಲ್ಲಿ ನಾವಾಗಿ ಯಾರನ್ನೂ ಹೊಡೆಯಲು ಹೋಗುವುದಿಲ್ಲ. ಯಾರಾದರೂ ನಮಗೆ ಹೊಡೆದರೆ ಅವರು ಯಾವುದರಲ್ಲಿ ಹೊಡೆದರೋ ಅದರಲ್ಲೇ ತಿರುಗಿಸಿ ಹೊಡೆಯುತ್ತೇವೆ. ಸಿದ್ದರಾಮಯ್ಯ ಅವರು ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕಿತ್ತು ಆದರೆ ಸಿದ್ದರಾಮಯ್ಯ ಅವರು ದೇಶದ್ರೋಹಿ ಓವೈಸಿ ಜೊತೆ ಕೈ ಜೋಡಿಸಿದ್ದಾರೆ ಎಂದು ಹೇಳಿದರು.
ಅದಲ್ಲದೇ, ಖರ್ಗೆ ಮತ್ತು ಸಿದ್ದರಾಮಯ್ಯ ಯಾವ ಪ್ರಾಣಿ ಹಾಗೂ ಯಾವ ಸಂತತಿ ಎಂದು ನೀವೆ ಹೇಳಿ. ಸಿದ್ದರಾಮಯ್ಯ ಮೋದಿ ಹಾಗೂ ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ನಿಂದಿಸುತ್ತಾರೆ. ಖರ್ಗೆ ಹೆಗಡೆವಾರ್ ಅವರನ್ನು ಏಕ ವಚನದಲ್ಲಿ ನಿಂದಿಸುತ್ತಾರೆ. ಇವರುಗಳು ಯಾವ ಪ್ರಾಣಿ ಎಂದು ಸ್ಪಷ್ಟಪಡಿಸಲಿ. ಕಾಂಗ್ರೆಸ್ ವಿದೇಶಿ ವ್ಯಕ್ತಿಗಳ ಕೈಯಲ್ಲಿ ಸಿಲುಕಿಕೊಂಡಿದೆ. ಸೋನಿಯಾಗಾಂಧಿ ಭಾರತೀಯರಾ ಎಂಬುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಲಿ. ಇಂದಿರಾಗಾಂಧಿ ಪತಿ ಫಿರೋಜ್ ಗಾಂಧಿ ಸ್ವಾತಂತ್ರ್ಯ ಹೋರಾಟಗಾರರಾ….? ಫಿರೋಜ್ ಗಾಂಧಿ ಭಾರತೀಯರ ಎಂಬುದನ್ನು ಸ್ಪಷ್ಟಪಡಿಸಿ. ಹೆಗಡೆವಾರ್ ಅವರನ್ನು ಯಾವನ್ರೀ ಅವನು ಎಂದು ಕರೆದಿದ್ದು ಇಡೀ ದೇಶದ ಜನರಿಗೆ ನೋವಾಗಿದೆ. ಖರ್ಗೆ ಅವರು ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆ ಕೇಳಿ ದೊಡ್ಡವರಾಗಬೇಕು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ರಾಷ್ಟ್ರಧ್ವಜ ಬಳಸಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ಸಿಗರು. ರಾಷ್ಟ್ರಧ್ವಜದ ಬಗ್ಗೆ ಸುಳ್ಳು ಹೇಳುವ ಡಿ.ಕೆ.ಶಿವಕುಮಾರ್ ದೇಶದ್ರೋಹಿ ಎಂದು ಕಿಡಿಕಾಡಿದ್ದಾರೆ.
ನಂತರ ಮಾತನಾಡಿದ ಅವರು, ಆರ್ ಎಸ್ ಎಸ್ ನಮ್ಮ ತಾಯಿ. ನಮ್ಮ ತಾಯಿಗೆ ಬೈದರೆ ಸಿಟ್ಟು ಬರುವುದು ಸಹಜ. ನಿನ್ ಅಮ್ಮನ್ ಎಂದರೆ ಯಾರಾದರೂ ಸುಮ್ಮನೆ ಕುಳಿತುಕೊಳ್ಳುತ್ತಾರಾ ? ಇಂದಿರಾಗಾಂಧಿ, ನೆಹರೂನೇ ಆರ್ ಎಸ್ ಎಸ್ ಅನ್ನು ಏನು ಮಾಡಲು ಆಗಿಲ್ಲ. ಇನ್ನು ಜುಜುಬಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಏನು ಮಾಡಲು ಆಗುತ್ತೆ ? ಸಿದ್ದರಾಮಯ್ಯ ಮೈಯಲ್ಲಿ ಅಹಲ್ಯಬಾಯಿ ಹೋಳ್ಕರ್ ರಕ್ತ ಹರಿಯುತ್ತಿದೆಯೋ ಅಥವಾ ಔರಂಗಜೇಬ್ ರಕ್ತ ಹರಿಯುತ್ತದೆಯೋ ಸ್ಪಷ್ಟಪಡಿಸಲಿ. ಅಧಿಕಾರ ದಾಹಿ ಸಿದ್ದರಾಮಯ್ಯ. ಅದಕ್ಕಾಗಿ ಇದೀಗ ಓವೈಸಿ ಜೊತೆ ಸೇರಿದ್ದಾರೆ. ದೇಶಭಕ್ತ ಮುಸಲ್ಮಾನರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸೇರಬಾರದು. ದೇಶದಲ್ಲಿ ಎಲ್ಲೆಡೆಯೂ ಮಸೀದಿಗಳಲ್ಲಿ ಐತಿಹಾಸಿಕ ದೇವಾಲಯಗಳು ಪತ್ತೆಯಾಗುತ್ತಿವೆ. ಹೀಗಾಗಿ ಈ ವಿಷಯವನ್ನು ಡೈವರ್ಟ್ ಮಾಡಲು ಆರ್ಯ, ದ್ರಾವಿಡ, ನಪುಂಸಕತ್ವ ಎಂಬ ವಿಷಯದ ಬಗ್ಗೆ ಚರ್ಚೆ ತಿರುಗಿಸುವ ಯತ್ನ ಕಾಂಗ್ರೆಸ್ಸಿಗರು ಮಾಡುತಿದ್ದಾರೆ ಎಂದು ಹೇಳಿದರು.