Friday, November 22, 2024

ಕಾಣೆಯಾದವ್ರಿಗೆ ಪವರ್ ಟಿವಿ ರೇಟಿಂಗ್: 4/5

ಸಿನಿಮಾ ಮನರಂಜನೆಯ ಜೊತೆಗೆ ಸಮಾಜದ ಅಂಕು ಡೊಂಕು ತಿದ್ದುವ ಪವರ್​ಫುಲ್ ಮಾಧ್ಯಮವೂ ಹೌದು. ಕಾಣೆಯಾದವರ ಬಗ್ಗೆ ಪ್ರಕಟಣೆ ಅನ್ನೋ ಟೈಟಲ್​​ ಇಟ್ಕೊಂಡು ಥಿಯೇಟರ್​ಗೆ ಬಂದಂತಹ ದಿಲ್​ವಾಲಾ ಅನಿಲ್ ಅಂಡ್ ಟೀಂ, ಕಾಣೆಯಾಗಿರೋದು ಮನುಷ್ಯರಲ್ಲ. ಅವ್ರಲ್ಲಿರೋ ಮಾನವೀಯ ಮೌಲ್ಯಗಳು ಅನ್ನೋದನ್ನ ಅರ್ಥೈಸಿದ್ದಾರೆ. ಇಷ್ಟಕ್ಕೂ ಪಿಕ್ಚರ್ ಹೆಂಗದೆ ಬಾಸು ಅಂತೀರಾ..? ಈ ರಿವ್ಯೂ ರಿಪೋರ್ಟ್​ ನೋಡಿ.

ಕಾಣೆಯಾದ ಮೌಲ್ಯಗಳನ್ನು ಪ್ರಕಟಿಸಿದ ಅನಿಲ್ & ಟೀಂ

ಕಾಣೆಯಾದವರು ಯಾರಾರು ? ಎಲ್ಲಿ & ಹೇಗೆ ಗೊತ್ತಾ ?

ರೋಗಿ ಬಯಸಿದ್ದೂ ಅದೇ, ಡಾಕ್ಟರ್ ನೀಡಿದ್ದೂ ಅದೇ ಅನ್ನೋ ಹಾಗಾಗಿದೆ ನಮ್ಮ ಫಿಲ್ಮ್ ಇಂಡಸ್ಟ್ರಿ ಕಥೆ. ಸಿಕ್ಕಾಪಟ್ಟೆ ವೈಭವೀಕರಣ. ಹೀರೋಗಳಿಗೆ ಬೇಜಾನ್ ಬಿಲ್ಡಪ್. ಕೋಟ್ಯಂತರ ರೂಪಾಯಿ ಬಂಡವಾಳ. ಆ್ಯಕ್ಟುಲಿ ಇದಲ್ಲ ಸಿನಿಮಾ ಅನ್ನೋ ಕಲೆ. ಸಾಮಾಜಿಕ ಚಿತ್ರಗಳು ಅಂದ್ರೆ ಅಣ್ಣಾವ್ರ ಕಾಲ ನೆನಪಾಗುತ್ತೆ. ಜನರ ಮೈಂಡ್​ಸೆಟ್​ ಬಿಟ್ಟು ಮನರಂಜನೆ ಜೊತೆ ಒಂದೊಳ್ಳೆ ಸಾಮಾಜಿಕ ಚಿತ್ರ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನಿಲ್. ಅದೇ ಕಾಣೆಯಾದವರ ಬಗ್ಗೆ ಪ್ರಕಟಣೆ.

ಅಂದಹಾಗೆ ಕಾಣೆಯಾಗಿರೋದು ಯಾರು..? ಪ್ರಕಟಣೆ ನೀಡಿದ್ದು ಯಾರು..? ಇನ್ವೆಸ್ಟಿಗೇಷನ್​ನಲ್ಲಿ ಬಯಲಾದ ಸತ್ಯಾ ಸತ್ಯತೆಗಳೇನು ಅನ್ನೋದೇ ಇಂಟರೆಸ್ಟಿಂಗ್. ರಾಕಿಭಾಯ್ ಯಶ್ ಕೂಡ ಮೆಚ್ಚಿದ ಈ ಸಿನಿಮಾ ಬಗ್ಗೆ, ಅವ್ರು ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆ. ಪ್ರೇಕ್ಷಕರ ಮನಗೆದ್ದು ರಾಜ್ಯಾದ್ಯಂತ ಕೌಟುಂಬಿಕ ಸಿನಿಮಾ ಆಗಿ ಭೇಷ್ ಅನಿಸಿಕೊಳ್ತಿದೆ. ಇಷ್ಟಕ್ಕೂ ಸಿನಿಮಾದ ಅಸಲಿಯತ್ತೇನು ಅಂತೀರಾ..? ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ಚಿತ್ರ: ಕಾಣೆಯಾದವರ ಬಗ್ಗೆ ಪ್ರಕಟಣೆ

ನಿರ್ದೇಶನ: ಅನಿಲ್ ಕುಮಾರ್

ನಿರ್ಮಾಣ: ಜಿತೇಂದ್ರ ಮಂಜುನಾಥ್, ಅನಿಲ್

ಸಂಗೀತ: ಅರ್ಜುನ್ ಜನ್ಯಾ

ಸಿನಿಮಾಟೋಗ್ರಫಿ: ಶಿವ ಬಿ.ಕೆ. ಕುಮಾರ್

ತಾರಾಗಣ: ರವಿಶಂಕರ್, ಚಿಕ್ಕಣ್ಣ, ರಂಗಾಯಣ ರಘು, ತಬಲಾ ನಾಣಿ, ಆಶಿಕಾ ರಂಗನಾಥ್, ಸಂಪದ, ತಿಲಕ್, ಅನಿಲ್ ಮುಂತಾದವರು.

ಕಾಣೆಯಾದವ್ರ ಸ್ಟೋರಿಲೈನ್

ಕೃಷ್ಣಮೂರ್ತಿ, ರಂಗ, ನಾಣಿ.. ಭೂಮಿ ಮೇಲಿನ ಸ್ವರ್ಗ ಬ್ಯಾಂಕಾಕ್, ಪಟಾಯದಿಂದ ಈ ಮೂವರು ವೃದ್ಧರ ಕಲರ್​ಫುಲ್ ಲೈಫ್ ಓಪನ್ ಆಗುತ್ತೆ. ಇವ್ರ ಟೂರಿಸ್ಟ್ ಗೈಡ್ ಚಿಕ್ಕ. 60ರ ದಶಕದ ವೈಟ್ ಅಂಡ್ ಬ್ಲ್ಯಾಕ್ ಕಾಲದಿಂದ ಈ ಕಲರ್​ಫುಲ್ ವಿಚಿತ್ರ ಜೀವನದವರೆಗೆ ಅವ್ರ ಜರ್ನಿ ನಿಜಕ್ಕೂ ರೋಚಕ, ರೋಮಾಂಚಕ. ಅದ್ರಲ್ಲೂ ಯೌವ್ವನದ ಇವರುಗಳ ಎಪಿಸೋಡ್ ಬಿಂದಾಸ್ ಆಗಿರುತ್ತೆ. ಬ್ಯಾಂಕಾಕ್​​ನಲ್ಲಿ ಎಲ್ಲರಂತೆ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾ, ಕಷ್ಟ- ಸುಖಗಳನ್ನ ಹಂಚಿಕೊಂಡು ಬದುಕೋ ಇವರುಗಳ ಫ್ಲ್ಯಾಶ್​ಬ್ಯಾಕ್ ನಗುವಿನ ಜೊತೆ ಕಣ್ಣೀರು ಕೂಡ ತರಿಸುತ್ತೆ.

ಈ ಮಧ್ಯೆ ಕೆರೆಯಲ್ಲಿ ಸಿಗೋ ಕಾರ್, ಅದ್ರಲ್ಲಿರೋ ಡೆಡ್​ಬಾಡಿ. ಅದ್ರ ಇನ್ವೆಸ್ಟಿಗೇಷನ್​ನಲ್ಲಿ ತೊಡಗೋ ಇನ್ಸ್​ಪೆಕ್ಟರ್ ಯಶವಂತ್. ಸುಪಾರಿ ಕಿಲ್ಲರ್​​ಗಳನ್ನ ಹುಡುಕಿ ಹೊರಡೋ ಇನ್ಸ್​ಪೆಕ್ಟರ್​​ಗೆ ಈ ಮೂವರು ಪ್ರಾಣ ಸ್ನೇಹಿತರಿಗೆ ಲಿಂಕ್ ಸಿಗುತ್ತೆ. ಇಷ್ಟಕ್ಕೂ ಆ ಕೊಲೆಗೂ ಇವರುಗಳಿಗೂ ಏನು ಸಂಬಂಧ..? ಅವ್ರು ಬ್ಯಾಂಕಾಕ್​ಗೆ ತೆರಳಲು ಕಾರಣವಾದ್ರೂ ಏನು ಅನ್ನೋದೇ ಚಿತ್ರದ ಸ್ಟೋರಿಲೈನ್.

ಕಾಣೆಯಾದವ್ರ ಪರ್ಫಾಮೆನ್ಸ್

ಕೃಷ್ಣಮೂರ್ತಿ, ರಂಗ & ನಾಣಿ ಪಾತ್ರಗಳಲ್ಲಿ ಆರ್ಮುಗಂ ರವಿಶಂಕರ್, ರಂಗಾಯಣ ರಘು ಹಾಗೂ ತಬಲಾ ನಾಣಿ ಮನೋಜ್ಞ ಅಭಿನಯ ನೀಡಿದ್ದಾರೆ. ಅವು ಬರೀ ಪಾತ್ರಗಳಾಗಿರದೆ, ಸಮಾಜದಲ್ಲಿನ ಮೂವರು ವೃದ್ಧರ ಮಾನಸಿಕ ವೇದನೆಯ ಪ್ರತಿರೂಪವಾಗಿದೆ. ಅಷ್ಟರ ಮಟ್ಟಿಗೆ ಪಾತ್ರಗಳಿಗೆ ಜೀವ ತುಂಬೋದ್ರಲ್ಲಿ ಈ ಮೂವರೂ ಸಿನಿಮಾದ ಹೀರೋಗಳಾಗಿ ನೋಡುಗರ ಹಾರ್ಟ್​ ಗೆಲ್ತಾರೆ.

ಟೂರಿಸ್ಟ್ ಗೈಡ್ ಆಗಿ ಚಿಕ್ಕಣ್ಣ, ಪೊಲೀಸ್ ಆಫೀಸರ್ ಆಗಿ ತಿಲಕ್, ವಿಲನ್ ಆಗಿ ಕೆಜಿಎಫ್​ನ ವಿನಯ್ ಬಿದ್ದಪ್ಪ ಹಾಗೂ ಆಶ್ರಮ ನಡೆಸೋ ಸಮಾಜಸೇವಕ ಜಗ್ಗಿ ಪಾತ್ರದಲ್ಲಿ ಶೋಭರಾಜ್ ಕೂಡ ಚಿತ್ರದ ಗತ್ತು ಹೆಚ್ಚಿಸಿದ್ದಾರೆ. ರವಿಶಂಕರ್ ಗೌಡ ಅವ್ರ ಯೌವ್ವನದ ಪಾತ್ರವನ್ನು ನಿರ್ದೇಶಕ ಅನಿಲ್ ಅವ್ರೇ ಪೋಷಿಸಿದ್ದು, ಬೆಲ್​ಬಾಟಂ ಸ್ಟೈಲ್​ನಲ್ಲಿ ಕೆಜಿಎಫ್​ನ ರಾಕಿಭಾಯ್ ಸ್ಟೈಲ್​ನಲ್ಲೇ ಖದರ್ ತೋರಿದ್ದಾರೆ. ಇನ್ನು ಆಶಿಕಾ ರಂಗನಾಥ್ ಸ್ಪೆಷಲ್ ಅಪಿಯರೆನ್ಸ್ ಕೂಡ ಕಾಡುವಂತಿದೆ.

ಕಾಣೆಯಾದವ್ರ ಪ್ಲಸ್ ಪಾಯಿಂಟ್ಸ್

  1. ಕಥೆ, ಚಿತ್ರಕಥೆ, ಅನಿಲ್ ನಿರ್ದೇಶನ & ನಿರೂಪಣೆ
  2. ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ ನಟನೆ
  3. ತಂದೆ- ಮಕ್ಕಳ ಸಂಬಂಧ, ಅನುಬಂಧದ ಎಳೆ
  4. ಬ್ಯಾಂಕಾಕ್​ನ ಕಲರ್​ಫುಲ್ ಲೈಫ್
  5. ಅರ್ಜುನ್ ಜನ್ಯಾ ಹಿನ್ನೆಲೆ ಸಂಗೀತ
  6. 60 ಹಾಗೂ 80ರ ದಶಕದ ಸೀಕ್ವೆನ್ಸ್​
  7. ವಸುದೈವ ಕುಟುಂಬಕಂ ಕಾನ್ಸೆಪ್ಟ್

 

ಕಾಣೆಯಾದವ್ರ ಮೈನಸ್ ಪಾಯಿಂಟ್ಸ್

ಅನಿಲ್ ಕನ್ನಡ ಚಿತ್ರರಂಗಕ್ಕೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ಕೊಟ್ಟಂತಹ ನಿರ್ದೇಶಕ. ಹಾಗಾಗಿ ಈ ಸಿನಿಮಾನ ಅವ್ರೇ ನಿರ್ಮಿಸಿರೋದ್ರಿಂದ ಬಹಳ ಅಚ್ಚುಕಟ್ಟಾಗಿ, ಯಶ್ ಅಂತಹ ಮಾಸ್ಟರ್​ಮೈಂಡ್ ಜೊತೆ ಎಲ್ಲಾ ಕೂತು, ಕಥೆ ಡಿಸ್ಕಸ್ ಮಾಡಿ ಸಿನಿಮಾ ಮಾಡಿದ್ದಾರೆ. ಇಂದಿನ ಜನರೇಷನ್​ಗೆ ಇಂತಹ ಕತೆಗಳ ಅನಿವಾರ್ಯತೆ ಇದ್ದು, ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಯಾವುದರ ವೈಭವೀಕರಣವಿಲ್ಲದೆ ಸೊಗಸಾಗಿ ಸಿನಿಮಾ ಮಾಡಿದ್ದಾರೆ. ಆದ್ರೆ ಸಂಭಾಷಣೆ ಅಲ್ಲಲ್ಲಿ ಡಬಲ್ ಮೀನಿಂಗ್ ಅನಿಸಲಿದೆ. ಅದೊಂದೇ ನಾವು ಹುಡುಕಬೇಕಿರೋ ತಪ್ಪು.

ಕಾಣೆಯಾದವ್ರಿಗೆ ಪವರ್ ಟಿವಿ ರೇಟಿಂಗ್: 4/5

ಕಾಣೆಯಾದವ್ರ ಫೈನಲ್ ಸ್ಟೇಟ್​ಮೆಂಟ್

ಪೋಷಕರು ಹಾಗೂ ಇಂದಿನ ಜನರೇಷನ್ ಮಕ್ಕಳ ಮೈಂಡ್​ಸೆಟ್ ಕುರಿತ ಟ್ರೆಂಡಿಂಗ್ ಸಿನಿಮಾ ಇದು. ಇಂಥದ್ದೊಂದು ಕಥೆಯ ಅವಶ್ಯಕತೆ ಇಂದಿನ ಸಮಾಜಕ್ಕೆ ಇತ್ತು. ಅದನ್ನ ನಿರ್ದೇಶಕ ಅನಿಲ್ ಈ ಸಿನಿಮಾದ ಮೂಲಕ ನೀಗಿಸಿದ್ದಾರೆ. ಪ್ರತಿಯೊಬ್ಬ ಪೋಷಕರು ಮಕ್ಕಳು ಸಮೇತ ನೋಡಬೇಕಾದ ಚಿತ್ರವಿದು. ಇಲ್ಲಿ ಮನರಂಜನೆಯ ಜೊತೆಗೆ ಎಮೋಷನ್ಸ್ ಕಾಡಲಿವೆ. ಜೊತೆಗೆ ನ್ಯೂಕ್ಲಿಯರ್ ಫ್ಯಾಮಿಲಿಗಳ ಮಧ್ಯೆ ವಸುದೈವ ಕುಟುಂಬಕಂ ಕಾನ್ಸೆಪ್ಟ್ ನೋಡುಗನ ಹೃದಯ ಕಲಕಲಿದೆ. ಗೆಳೆತನದ ಮಹತ್ವ, ಮಾನವೀಯ ಮೌಲ್ಯಗಳನ್ನ ಮೋಜು- ಮಸ್ತಿಯೊಂದಿಗೆ ಬ್ಲೆಂಡ್ ಮಾಡಿ ತೋರಿಸಿದ್ದಾರೆ ಅನಿಲ್. ಇಲ್ಲಿ ಕಥೆಯೇ ಹೀರೋ. ಅದ್ರಲ್ಲೂ ರಂಗಾಯಣ ರಘು, ರವಿಶಂಕರ್, ನಾಣಿ ಅವ್ರನ್ನ ಹೀಗೂ ತೋರಿಸಿಬಹುದು ಅನ್ನೋದಕ್ಕೆ ಈ ಚಿತ್ರ ಸಾಕ್ಷಿ ಆಗ್ತಿದೆ. ಒಟ್ಟಾರೆ ಈ ವಾರ ಸಿನಿಮಾ ಮಂದಿರಗಳಿಗೆ ಹೋಗೋರಿಗೆ ಇಂದೊಂದು ಬೇರೆಯದ್ದೇ ರೀತಿಯ ಅನುಭವ ನೀಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES