Wednesday, November 6, 2024

ರೈತನ ಮಗಳು, ಈಗ ಗೋಲ್ಡನ್ ಗರ್ಲ್

ಬಾಗಲಕೋಟೆ : ವೇದಿಕೆ ಮೇಲೆ ರಾಜ್ಯಪಾಲರಿಂದ ಪದವಿ ಪ್ರಮಾಣಪತ್ರ ಚಿನ್ನದ ಪದಕ ವಿತರಣೆ. ತಮಗೆ ಸಿಕ್ಕ ಚಿನ್ನದ ಪದಕ ತೋರಿಸಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳು. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ. ತೋಟಗಾರಿಕೆ ವಿವಿಯಲ್ಲಿ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಸ್ನಾತಕ ,ಸ್ನಾತಕೋತ್ತರ, ಪಿಹೆಚ್​ಡಿ ಸೇರಿದಂತೆ ಒಟ್ಟು 680 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ಇದರಲ್ಲಿ ಓರ್ವ ರೈತನ‌ ಮಗಳು ಉಮ್ಮೇಸರಾ ಹಸ್ಮತ್ ಅಲಿ ಎಂಬ ವಿದ್ಯಾರ್ಥಿನಿ ತೋಟಗಾರಿಕೆ ಬಿಎಸ್​​ಸಿ ಪದವಿಯಲ್ಲಿ ಬರೊಬ್ಬರಿ 16 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿ ಎನ್ನಿಸಿಕೊಂಡಿದ್ದಾಳೆ.

ಉಮ್ಮೇಸರಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಗುಲ್ಲಂಪೇಟೆ ಮೂಲದವರು. ಸದ್ಯ ಶಿರಸಿಯಲ್ಲಿ ತೋಟಗಾರಿಕೆ ಬಿಎಸ್​ಸಿ ಪದವಿ‌ ಮುಗಿಸಿದ್ದಾರೆ. ಇವರ ತಂದೆ ಹಸ್ಮತ್ ಅಲಿ ರೈತನಾಗಿದ್ದು ನಾಲ್ಕು ಎಕರೆ ಹೊಲ ಇದೆ. ಮಗಳ ಸಾಧನೆಗೆ ಸಂಭ್ರಮಿಸುತ್ತಲೇ ಅಸಮಾಧಾನ ಹೊರಹಾಕಿದ ತಂದೆ, ಮಗಳು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಕನಸು ಹೊಂದಿದ್ದಾಳೆ. ನಮ್ಮ ಹೊಲದ ಮೇಲೆ 15 ಲಕ್ಷ ಸಾಲ ಕೊಡಲು ಯಾವ ಬ್ಯಾಂಕ್ ಒಪ್ಪುತ್ತಿಲ್ಲ. ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಒಟ್ಟಾರೆ ರೈತನ ಮಗಳು ಉಮ್ಮೇಸರಾ ಬಡತನವಾಗಲಿ, ಹಿನ್ನೆಲೆಯಾಗಲಿ ಸಾಧನೆಗೆ ಅಡ್ಡಿಯಾಗಲ್ಲ ಅನ್ನೋದನ್ನ ಪ್ರೂವ್​ ಮಾಡಿದ್ದಾಳೆ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವಿದ್ಯಾರ್ಥಿನಿಯೇ ಸಾಕ್ಷಿ.

RELATED ARTICLES

Related Articles

TRENDING ARTICLES