ಬೆಂಗಳೂರು: ಮೊದಲೆಲ್ಲಾ ಯಡಿಯೂರಪ್ಪ ಅಂದ್ರೆ ಬಿಜೆಪಿ ಹೈಕಮಾಂಡ್‌ಗೂ ಭಯ ಇತ್ತು. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿಯ ಆಡಳಿತ ತಂದ ಬಿ.ಎಸ್. ಯಡಿಯೂರಪ್ಪ ಅಂದಿನ ಅಧ್ಯಕ್ಷ ರಾಜನಾಥ್ ಸಿಂಗ್‌ಗೂ ಒಮ್ಮೆ ನಡುಕ ಹುಟ್ಟಿಸಿದ್ದರು. ಅದಾದ ಬಳಿಕ ಬದಲಾದ ವಿದ್ಯಮಾನದಲ್ಲಿ ಕುಟುಂಬದ ಹಸ್ತಕ್ಷೇಪದಿಂದ ಭ್ರಷ್ಟಾಚಾರ ಹೆಚ್ಚಿ, ಅಧಿಕಾರವನ್ನು ಕಳೆದುಕೊಂಡರು. ಆದಾದ ಬಳಿಕ ಹಲವು ಸಭೆಗಳಿಂದ ಬಿ.ಎಸ್.ಯಡಿಯೂರಪ್ಪನವರನ್ನು ದೂರ ಇಡಲಾಗಿತ್ತು. ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಬೊಮ್ಮಾಯಿ, ಜೋಶಿ ಭಾಗಿಯಾಗಿದ್ದಾರೆ ವಿನಃ ಬಿಎಸ್‌ವೈ ಬಂದಿರಲಿಲ್ಲ. ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲು ಬಿಎಸ್ ವೈಗೆ ಅವಕಾಶ ಕೊಡ್ತಿಲ್ಲ. ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಗನಿಗೆ ಎಂಎಲ್ಸಿ ಮಾಡಿ ಸಚಿವರನ್ನಾಗಿಸುವಂತೆ ಬಿಎಸ್‌ವೈ ಏರು ಧ್ವನಿಯಲ್ಲಿ ಮಾತಾಡಿದ್ರು. ಆದ್ರೆ, ಅಲ್ಲಿದ್ದ ಪ್ರಮುಖರ್ಯಾರು ಬೇಡ ಅಂತ ನೇರವಾಗಿ ಹೇಳಿಲ್ಲ. ಆದ್ರೆ, ಎಂಎಲ್‌ಸಿ ಸೀಟ್ ತಪ್ಪಿಸಲು ತೆರೆಮರೆಯಲ್ಲಿ ಪ್ರಯತ್ನಪಟ್ಟರು. ಹೀಗಾಗಿ ಬಿ.ವೈ.ವಿಜಯೇಂದ್ರಗೆ ಬಿಎಸ್‌ವೈ ಆಗ್ರಹದ ನಡುವೆಯೂ ಟಿಕೆಟ್ ಕೈತಪ್ಪಿದೆ.
ವಿಜಯೇಂದ್ರಗೆ ಮೊದಲು ಎಂಎಲ್‌ಎ ಚುನಾವಣಾ ರಾಜಕೀಯಕ್ಕಿಂತ ಪರಿಷತ್‌ಗೆ ಆಯ್ಕೆ ಮಾಡಿ ಕಳುಹಿಸಿದ್ರೆ ಪ್ರಭಾವ ಕಡಿಮೆ ಮಾಡಬಹುದು ಅಂತ ಲೆಕ್ಕಾಚಾರಗಳಿದ್ದವು. ಪರಿಷತ್‌ಗೆ ಆಯ್ಕೆ ಮಾಡಿದರೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಿ ನಂತರ ನೋಡೋಣ ಅಂತ ವರಿಷ್ಟರು ಹೇಳ್ತಿದ್ದಾರೆ. ಆದ್ರೆ ಮೊದಲು ಕೆಜೆಪಿ ಕಟ್ಟಿ ಬಿಜೆಪಿಗೆ ಮತ್ತೆ ಬಂದಿರೋ ಬಿಎಸ್ವೈ ಬಂಡಾಯ ಏಳುವ ಮೂಡಲ್ಲಿ ಇಲ್ಲ. ಹೀಗಾಗಿ ಕಾದುನೋಡುವ ತಂತ್ರಕ್ಕೆ ಮೊರೆ ಹೊಗಿದ್ದಾರೆ. ಜೊತೆಗೆ, ಮುಂದೆ ಅವಕಾಶ ಮತ್ತು ಜವಾಬ್ದಾರಿಯನ್ನು ಪಕ್ಷ ನೀಡಲಿದೆ ಅಲ್ಲಿಯವರೆಗೆ ಕಾಯಬೇಕೆಂದಿದ್ದಾರೆ ಬಿಎಸ್‌ವೈ.
ಒಟ್ಟಿನಲ್ಲಿ ಬಿಎಸ್‌ವೈ ಕೋರ್ ಕಮಿಟಿ ಸಭೆಯಲ್ಲಿ ಘರ್ಜಿಸಿದ್ದು, ಮಾಧ್ಯಮದ ಮುಂದೆ ಸೈಲೆಂಟ್ ಆಗಿದ್ದಾರೆ. ಹಾಗೇ ಚುನಾವಣೆ ಹತ್ತಿರ ಬರ್ತಿದ್ದು ಮುಂದೇನಾಗಲಿದೆ ಅನ್ನೊದನ್ನು ಕಾದುನೋಡಬೇಕಿದೆ