Thursday, January 23, 2025

IPL 2022: ಇಂದು ರಾಯಲ್​ ಚಾಲೆಂಜರ್ಸ್​ಗೆ ಲಖನೌ ಸೂಪರ್ ಜೈಂಟ್ಸ್‌ ಸವಾಲ್​

ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್(IPL 2022)ನಲ್ಲಿ ಪ್ಲೇ ಆಫ್‌ ಅವಕಾಶ ಗಿಟ್ಟಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಕೆ.ಎಲ್​ ರಾಹುಲ್​ ನಾಯಕತ್ವದ ಎಲ್​ಎಸ್​ಜಿ (ಲಖನೌ ಸೂಪರ್ ಜೈಂಟ್ಸ್‌) ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗಿದೆ.

ಬುಧವಾರ (ಇಂದು) ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಎರಡು ತಂಡಗಳು ಮುಖಾಮುಖಿ ಆಗಲಿವೆ. ಇದೇ ಮೊದಲ ಸಲ ಐಪಿಎಲ್‌ನಲ್ಲಿ ಕಣಕ್ಕಿಳಿದಿರುವ ಹೊಸ ತಂಡ ಲಖನೌ ಲೀಗ್ ಹಂತದಲ್ಲಿಯೇ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ರಾಹುಲ್ ಎರಡು ಮತ್ತು ಕ್ವಿಂಟನ್ ಡಿಕಾಕ್ ಒಂದು ಶತಕ ಗಳಿಸಿದ್ದಾರೆ.

ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್‌ರೌಂಡರ್‌ಗಳಾದ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆರಂಭಿಕ ಓವರ್‌ಗಳಲ್ಲಿಯೇ ವಿಕೆಟ್ ಗಳಿಸುವ ಆವೇಶ್ ಖಾನ್, ಮೊಹಸೀನ್ ಖಾನ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಎದುರಿಸುವ ಸವಾಲು ಬೆಂಗಳೂರು ಬ್ಯಾಟಿಂಗ್ ಪಡೆಯ ಮುಂದಿದೆ.

ಸತತ ವೈಫಲ್ಯಗಳ ನಂತರ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಲಯಕ್ಕೆ ಮರಳಿರುವುದು ತಂಡದಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಯಕ ಡುಪ್ಲೆಸಿ, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಆದರೆ ಬೌಲರ್‌ಗಳು ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ತಂಡಕ್ಕೆ ಇದೆ. ಹರ್ಷಲ್ ಪಟೇಲ್, ಸ್ಪಿನ್ನರ್ ವಣಿಂದು ಹಸರಂಗಾ ಮತ್ತು ಜೋಶ್ ಹ್ಯಾಜಲ್‌ವುಡ್ ಅವರು ರಾಹುಲ್ ಪಡೆಯ ಅಬ್ಬರಕ್ಕೆ ತಡೆಯೊಡ್ಡುವಲ್ಲಿ ಸಫಲರಾದರೆ ಆರ್‌ಸಿಬಿಗೆ ಎರಡನೇ ಕ್ವಾಲಿಫೈಯರ್ ಪ್ರವೇಶಿಸುವ ಅವಕಾಶ ಲಭಿಸಬಹುದು.

RELATED ARTICLES

Related Articles

TRENDING ARTICLES