ಶಿವಮೊಗ್ಗ: ಸಾಮಾನ್ಯವಾಗಿ, ಮಕ್ಕಳಾದಾಗ, ತಾಯಿಯನ್ನು ನೋಡಿಕೊಳ್ಳೋದು ಕಷ್ಟ. ಅದರಲ್ಲೂ ಅವಳಿ-ಜವಳಿಯಾದಾಗಲಂತೂ, ತುಸು ಕಷ್ಟವೇ ಹೆಚ್ಚು. ಆದರೆ, ಇಲ್ಲೊಬ್ಬ ಮಹಾತಾಯಿ, ಒಮ್ಮೆಲೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ಹೆರಿಗೆ ಮಾಡಿದ ವೈದ್ಯರು ಸೇರಿದಂತೆ, ಆಸ್ಪತ್ರೆ ಸಿಬ್ಭಂಧಿಗಳು, ಖುಷಿಯಾಗಿದ್ದಾರೆ. ಅಪರೂಪದ ಪ್ರಕರಣವೊಂದಕ್ಕೆ ಈ ಆಸ್ಪತ್ರೆ ಇದೀಗ ಸಾಕ್ಷಿಯಾಗಿದ್ದು, ಆಸ್ಪತ್ರೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಇಲ್ಲೊಬ್ಬ ಮಹಾತಾಯಿ, ನಾಲ್ಕು ಮಕ್ಕಳಿಗೆ ಜನುಮ ನೀಡಿದ್ದು, ಯಾವುದೇ ಸಮಸ್ಯೆಯಿಲ್ಲದೇ, ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು 5 ಲಕ್ಷದ 15 ಸಾವಿರ ಪ್ರಕರಣಗಳಲ್ಲಿ ಒಂದು ಪ್ರಕರಣ ಇದಾಗಿದ್ದು, ಶಿವಮೊಗ್ಗದ ಸರ್ಜಿ ಆಸ್ಪತ್ರೆ ವೈದ್ಯರು, ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ, ಗೆಲುವಿನ ನಗೆ ಬೀರಿದ್ದಾರೆ. ಈ ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದ್ದು, ಶಿವಮೊಗ್ಗದ ಭದ್ರಾವತಿಯ ತಡಸ ಗ್ರಾಮದ ಆರೀಫ್ ಹಾಗೂ ಅಲ್ಮಾಜ್ ಬಾನು ದಂಪತಿಗಳಿಗೆ 4 ಮಕ್ಕಳು ಜನನವಾಗಿದ್ದು, ನವಜಾತ ಶಿಶುಗಳು ಆರೋಗ್ಯದಿಂದಿವೆ.
1.1, 1.2, 1.3, ಹಾಗೂ 1.8 ಕೆ.ಜಿ. ತೂಕ ಹೊಂದಿರುವ ನವಜಾತ ಶಿಶುಗಳು ಆರೋಗ್ಯದಿಂದಿವೆ. 22 ವರ್ಷದ ಅಲ್ಮಾಜ್ ಬಾನುವಿಗೆ ನಿನ್ನೆ ಭಾನುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇಂದು ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿದೆಯಲ್ಲದೇ, ಚೊಚ್ಚಲ ಹೆರಿಗೆಯಲ್ಲಿಯೇ, 4 ಮಕ್ಕಳನ್ನು ಹೇರುವ ಭಾಗ್ಯ ಒದಗಿ ಬಂದಿದೆ. 32 ವಾರಗಳು ಮತ್ತು 5 ದಿನಕ್ಕೆ ಅಲ್ಮಾಜ್ ಬಾನುವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇದೀಗ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಎನಿಸಿಕೊಂಡಿದ್ದಾರೆ.
ಅಂದಹಾಗೆ, ನಾಲ್ಕು ಶಿಶುಗಳು ಮತ್ತು ತಾಯಿ ಅಲ್ಮಾಜ್ ಬಾನು ಆರೋಗ್ಯದಿಂದಿದ್ದು, ಸರ್ಜಿ ಆಸ್ಪತ್ರೆ ವೈದ್ಯರು, ಕಣ್ಣಲ್ಲಿ ಕಣ್ಣಿಟ್ಟು ಶಿಶುಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ನಾಲ್ಕು ಮಕ್ಕಳಲ್ಲಿ 2 ಮಕ್ಕಳಿಗೆ ಸಿಪ್ಯಾಪ್ ಅಳವಡಿಸಲಾಗಿದ್ದು, 2 ಶಿಶುಗಳಿಗೆ ಆಕ್ಸಿಜನ್ ನೀಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೇ, ಆಸ್ಪತ್ರೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಈ ರೀತಿ ಪ್ರಕರಣ ಬಂದಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಲ್ಮಾಜ್ ಬಾನು ಪತಿ ಆರೀಫ್ ದುಬೈನಲ್ಲಿದ್ದು, ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು, ಅಪರೂಪದ ಹೆರಿಗೆ ಮಾಡಿಸಿದ ಆಸ್ಪತ್ರೆ ಸಿಬ್ಭಂಧಿ ಮತ್ತು ವೈದ್ಯರು, ಕೇವಲ ಮಹಾತಾಯಿ ಅಲ್ಮಾಜ್ ಗೆ ತರಬೇತಿ ಮತ್ತು ಚಿಕಿತ್ಸೆ ನೀಡುವುದಲ್ಲದೇ, ಇದೀಗ ಅಲ್ಮಾಜ್ ಬಾನು ಕುಟುಂಬ ಸದಸ್ಯರಿಗೂ ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿ ಬಗ್ಗೆ ತಿಳಿ ಹೇಳುತ್ತಿದ್ದಾರೆ. ಕಾಂಗರೂ ಮದರ್ ಕೇರ್ ಸೇರಿದಂತೆ, ನಾಲ್ಕು ನವಜಾತ ಶಿಶುಗಳ ತೂಕ ಹೆಚ್ಚಾಗುವವರೆಗೂ ಅವರನ್ನು ಆರೈಕೆ ಮಾಡುವ ಬಗ್ಗೆ ತರಬೇತಿ ನೀಡುತ್ತಿದ್ದು, ಎಲ್ಲರೂ ಖುಷಿಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಪ್ರಕರಣಗಳು ವಿರಳವಾಗಿದ್ದು, ಅನುವಂಶಿಯ ಕಾರಣದಿಂದ ಇಂತಹ ಪ್ರಕರಣಗಳು ಕಂಡು ಬರುವುದು ಅಪರೂಪವಾಗಿವೆ. ಏನೇಯಾಗ್ಲೀ, ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮಕ್ಕಳನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದು, ಎಲ್ಲೆಡೆ ಇದೆ ಚರ್ಚೆಯಾಗಿದ್ದು, ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಶ್ಲಾಘಿಸುತ್ತಿದ್ದಾರೆ.