ವಿಜಯಪುರ : ದೈನಂದಿನ ಖಾದ್ಯಗಳಲ್ಲಿ ಅತೀ ಹೆಚ್ಚು ಬಳಕೆಯಾಗುವ ಆಂಗ್ಲದ ಆನಿಯನ್ ಅನ್ನ ದಕ್ಷಿಣ ಕರ್ನಾಟಕದಲ್ಲಿ ಈರುಳ್ಳಿ ಎಂದು ಉತ್ತರ ಕರ್ನಾಟಕ ಭಾಗದಲ್ಲಿ ಉಳ್ಳಾಗಡ್ಡಿ ಎಂತಲೂ ಕರೆಯುತ್ತಾರೆ. ರಾಜ್ಯದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವುದು ಉತ್ತರ ಕರ್ನಾಟಕದ ವಿಜಯಪುರದಲ್ಲಿ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ವಿವರಣೆ ಪ್ರಕಾರ ಈ ಸಾಲಿನ ಮುಂಗಾರಿನಲ್ಲಿ 20 ಸಾವಿರ ಹೆಕ್ಟೇರ್, ಹಿಂಗಾರಿನಲ್ಲಿ 23 ಸಾವಿರ ಹೆಕ್ಟೇರ್ ಹಾಗೂ ‘ಬೇಸಿಗೆ ಈರುಳ್ಳಿ’ ಎಂದೇ ಕರೆಯಲಾಗುವ ಹಂಗಾಮು ಅಂದರೆ ಫೆಬ್ರವರಿಯ ನಂತರದಲ್ಲಿ ಜಿಲ್ಲೆಯಲ್ಲಿ ಒಟ್ಟು 4368 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಮೂರು ತಿಂಗಳು ಮಗುವಿನಂತೆ ಆರೈಕೆ ಮಾಡಿದ ನಂತರ ಕೈ ಸೇರುವ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ನಾಸಿಕ್’ನಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆವಕವಾಗಿರುವುದು, ಇದರ ಜೊತೆಗೆ ಹವಾಮಾನ ವೈಪರಿತ್ಯ, ಮಳೆ ಇವೆಲ್ಲಾ ಕಾರಣಗಳಿಂದ ಬೇಸಿಗೆ ಈರುಳ್ಳಿ ಬೆಳೆದ ಜಿಲ್ಲೆಯ ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಮೂರು ತಿಂಗಳ ಬೆಳೆಯಾದ ಈರುಳ್ಳಿಯನ್ನ ನೀರಿನ ಕೊರತೆ ಕಾರಣದಿಂದ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಡಿಮೆ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಮಂಜು, ಮಳೆ, ಆಲಿಕಲ್ಲು ಮಳೆ ಸೇರಿದಂತೆ ಹವಾಮಾನ ವೈಪರಿತ್ಯಗಳಿಂದ ಈರುಳ್ಳಿ ಬೆಳೆಯನ್ನ ಬಿತ್ತಿ ಬೆಳೆದು ಮೂರು ತಿಂಗಳ ಕಾಲ ಮಗುವಿನಂತೆ ರೈತ ಸಂರಕ್ಷಿಸಬೇಕು. ಜೊತೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ. ಎರಡು-ಮೂರು ಸಲ ನೀರು ಹರಿಸಿ, ಅಗತ್ಯ ಬಿದ್ದಾಗ ಔಷಧ ಸಿಂಪಡಿಸಿ, ಸಂರಕ್ಷಿಸಿ ಫಸಲು ಬಂದಾಗ ಮಾರುಕಟ್ಟೆಗೆ ಸಾಗಾಟದ ವೆಚ್ಚವನ್ನೂ ಭರಿಸಿ ಸಾಗಿಸಬೇಕು. ಸ್ವತ್ಹ ಸ್ವಂತ ಜಮೀನಿನಲ್ಲಿ ಬೆಳೆದ ರೈತ ವ್ಯಯಿಸಿದ ಮಾನವಶಕ್ತಿಯ ವೆಚ್ಚವನ್ನ ಸಹ ಹೊರತುಪಡಿಸಿದಾಗಲೂ ಪ್ರತಿ ಎಕರೆ ಈರುಳ್ಲಿ ಬೆಳೆಯಲು ರೈತರು ಕನಿಷ್ಠ 50 ಸಾವಿರದಿಂದ 75 ಸಾವಿರ ವೆಚ್ಚ ಮಾಡಬೇಕು. ಇಷ್ಟೆಲ್ಲಾ ಮಾಡಿದಾಗ ಮಾತ್ರ ಎಕರೆಗೆ ಎಂಟರಿಂದ ಹತ್ತು ಟನ್ ಫಸಲು ಕೈ ಸೇರುವ ಸಾಧ್ಯತೆ. ಇದಾದ ಮೇಲೆ ಮಾರುಕಟ್ಟೆಗೆ ಸಾಗಿಸಿದ ನಂತರ ಮಧ್ಯವರ್ತಿಗಳ ಹಾವಳಿ ಬೇರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶ ರಾಜ್ಯಗಳಿಂದ ಅದೇ ಬೆಳೆಯ ಆವಕದ ಆರ್ಭಟ ಬೇರೆ. ಇದೆಲ್ಲಾ ಕಾರಣಗಳು ಸೇರಿ ಇದೀಗ ಜಿಲ್ಲೆಯಲ್ಲಿ ಈರುಳ್ಳಿ ಮಾರುಕಟ್ಟೆ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಒಂದೆಡೆ ಇನ್ನಿತರ ತರಕಾರಿಗಳ ಬೆಲೆ ಗಗನಕ್ಕೇರಿದರೆ, ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡು, ಈರುಳ್ಳಿ ಬೆಳೆದ ರೈತಾಪಿ ವರ್ಗ, ಅನ್ನದಾತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಹತಾಶೆ, ಆಕ್ರೋಶದ ಕಟ್ಟೆಯೊಡೆಯುತ್ತಿದೆ ಎನ್ನಬಹುದು.
ಮೂರು ತಿಂಗಳಿನ ಈರುಳ್ಳಿ ಬೆಳೆ ಬೆಳೆದ ರೈತನಿಗೆ ಪ್ರತಿ ಕ್ವಿಂಟಾಲಿಗೆ ಕನಿಷ್ಠ ಎರಡರಿಂದ ಎರಡೂವರೆ ಸಾವಿರ ಮಾರುಕಟ್ಟೆ ದರ ಸಿಕ್ಕಾಗ ಮಾತ್ರ ಅನ್ನದಾತನ ಮೊಗದಲ್ಲಿ ನಗುವರಳಲು ಸಾಧ್ಯ. ಆದರೆ ಇದೀಗ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ 250 ರಿಂದ 800 ರೂಪಾಯಿಗೆ ಕುಸಿತ ಕಂಡಿದೆ. ಇದು ರೈತಾಪಿ ವರ್ಗ ಕಂಗಾಲಾಗುವಂತೆ ಮಾಡಿದೆ. ತಮ್ಮ ನೋವನ್ನ ಎಪಿಎಂಸಿ ಆಡಳಿತ ಮಂಡಳಿಗಳು, ತೋಟಗಾರಿಕೆ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದು ತಮ್ಮ ನೆರವಿಗೆ ಧಾವಿಸಬೇಕೆಂದು ನೊಂದ ರೈತರು ಮಾಧ್ಯಮಗಳ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಲಕ್ಷವಹಿಸಿ ರೈತರ ಸಮಸ್ಯೆಗೆ ನೆರವಾಗುತ್ತಾರಾ ಕಾದು ನೊಡೋಣ.