ಬೆಂಗಳೂರು: ರಾಜ್ಯದಲ್ಲಿ ಮತ್ತೆ ಟೊಮ್ಯಾಟೊ ದರ ಏರಿಕೆ ಕಂಡಿದೆ. ಟೊಮ್ಯಾಟೊ ದರ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಗಗನಕ್ಕೇರಿದ ಟೊಮ್ಯಾಟೊ ದರ ಗ್ರಾಹಕರಿಗೆ ಶಾಕ್ ನೀಡಿದೆ. ಈ ಹಿಂದೆ ಕೆ.ಜಿ ಟೊಮ್ಯಾಟೊ ಬೆಲೆ 100ರೂ. ಗಡಿ ದಾಟಿತ್ತು. ಆಗ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ದರ ಏರಿಕೆಯಾಗಿತ್ತು. ಆದ್ರೀಗ ಬೇಸಿಗೆಯಲ್ಲೂ ಸುರಿದ ಬಾರಿ ಮಳೆಗೆ ಬೆಳೆ ನಾಶ ಆಗಿದೆ . ಇದರ ಪರಿಣಾಮ ಟೊಮ್ಯಾಟೊ ಬೆಳೆದವರಿಗೆ ಇಳುವರಿ ಸಿಕ್ಕಿಲ್ಲ . ಹೀಗಾಗಿ ಈಗ ಬೇಡಿಕೆ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಗೆ ಟೊಮ್ಯಾಟೊ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.
ಇಂದು ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊಗೆ 110 ರೂ ಇದೆ. ಆನ್ ಲೈನ್ನಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೊ ಬೆಲೆ 120 ರವರೆಗೆ ಮಾರಾಟವಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 60 ರಿಂದ 70 ರೂಪಾಯಿ ಇತ್ತು. ಆದ್ರೀಗ ಬರೋಬ್ಬರಿ 120 ರೂ. ಗೆ ಟೊಮ್ಯಾಟೊ ಮಾರಾಟವಾಗುತ್ತಿದೆ. ಒಂದು ವಾರದಿಂದ ನಿರಂತರವಾಗಿ ಟೊಮ್ಯಾಟೊ ಬೆಲೆ ಏರಿಕೆ ಕಾಣುತ್ತಿದ್ದು ಏರಿಕೆ ಹಿನ್ನೆಲೆ ಗ್ರಾಹಕರು ಕಂಗಾಲಾಗಿದ್ದಾರೆ. ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದ್ದು, ತರಕಾರಿ ಕೊಳ್ಳುವವರ ನಿದ್ರೆಗೆಡಿಸಿದೆ.
ಇನ್ನು ಹೊಸ ಇಳುವರಿ ಬರಲು 3 ರಿಂದ 4 ತಿಂಗಳು ಕಾಲಾವದಿ ಬೇಕಿದೆ. ಅಲ್ಲಿಯವರೆಗೆ ಟೊಮ್ಯಾಟೊ ದರದಲ್ಲಿ ಇದೇ ರೀತಿ ಏರಿಕೆಯಾಗುವ ಸಾಧ್ಯತೆ ಇದೆ. ಕನಿಷ್ಠ ಇನ್ನು 3 ತಿಂಗಳು ಟೊಮ್ಯಾಟೊ ದರ ಇಳಿಯುವ ಲಕ್ಷಣ ಕಾಣ್ತಿಲ್ಲ. ಉತ್ತಮ ಗುಣಮಟ್ಟದ ಟೊಮ್ಯಾಟೊ ಸಿಗ್ತಿಲ್ಲ. ಗ್ರಾಹಕರು ಚೌಕಾಸಿ ಮಾಡ್ತಿದ್ದಾರೆಂದು ವ್ಯಾಪಾರಿಗಳು ಗೋಳಾಡುತ್ತಿದ್ದಾರೆ.
ಕೋಲಾರದಿಂದ ಬರುವ 14 ಕೆ.ಜಿ ಬಾಕ್ಸ್ ಟೊಮ್ಯಾಟೊಗೆ 1500 ರಿಂದ 1800 ರೂ ಇದೆ. ಮೈಸೂರು ಭಾಗದಿಂದ ಬರುವ 22 ಕೆ.ಜಿಯ ಬಾಕ್ಸ್ ಟೊಮ್ಯಾಟೊಗೆ 1,100 ರೂಪಾಯಿ ಇದೆ. ಇನ್ನು ಮತ್ತೊಂದು ಕಡೆ ದುಡ್ಡು ಕೊಟ್ರೂ ಒಳ್ಳೆಯ ಕ್ವಾಲಿಟಿಯ ಟೊಮ್ಯಾಟೊ ಸಿಗೋದು ಕಷ್ಟವಾಗಿದೆ. ಇದೆಷ್ಟೇ ಅಲ್ಲದೆ, ಟೊಮ್ಯಾಟೊ ಬೆಲೆ ಜೊತೆಗೆ ಇತರೆ ತರಕಾರಿ ದರದಲ್ಲೂ ಏರಿಕೆ ಕಂಡು ಬರುತ್ತಿದೆ.ಹೀಗಾಗಿ ರಾಜ್ಯಧಾನಿ ಜನ ಟೊಮೇಟೊ ಬದಲಿಗೆ ಹುಣಸೆಹಣ್ಣಿನ ಮೊರೆ ಹೋಗುತ್ತಿದ್ದಾರೆ.