ಬೆಂಗಳೂರು: ತೆರಿಗೆ ವಂಚನೆ ತಡೆಯಲು ಬಿಬಿಎಂಪಿ ಹೊಸ ಫಾರ್ಮುಲಾ ಕಂಡುಕೊಂಡಿದೆ. ಮನೆ, ಮಹಡಿಗಳಿಗೆ ವಿದ್ಯುತ್ ಸಂಪರ್ಕ ಪಡೆದಿದ್ರೂ, ಬಿಬಿಎಂಪಿಗೆ ಖಾಲಿ ನಿವೇಶನಗಳೆಂದು ಮಣ್ಣೆರೆಚಲಾಗ್ತಿದೆ. ಇಂಥ ವಂಚಕೋರರನ್ನ ಪತ್ತೆ ಹಚ್ಚಲು ಬಿಬಿಎಂಪಿ ಅಧಿಕಾರಿಗಳು ಟ್ರ್ಯಾಕಲ್ ಸಿಸ್ಟಮ್ ಜಾರಿ ಮಾಡಲು ಪ್ಲಾನ್ ರೂಪಿಸಿದ್ದಾರೆ. ಇದಕ್ಕಾಗಿ ಪಾಲಿಕೆ ಅಧಿಕಾರಿಗಳು ಬೆಸ್ಕಾಂ ಮೊರೆ ಹೋಗಿದ್ದು, ಜಂಟಿ ಕಾರ್ಯಾಚರಣೆಗಿಳಿದಿದ್ದಾರೆ.
ಕಳೆದ 10 ವರ್ಷಗಳಿಂದ ಇದೇ ರೀತಿ ದೋಖಾ ಆಗ್ತಿದ್ದು, ನೂರಾರು ಕೋಟಿ ತೆರಿಗೆ ಸೋರಿಕೆ ಆಗಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಡ್ರೋನ್ ಸರ್ವೇ ನಡೆಸಿ ಕಾರ್ಯಾಚರಣೆ ನಡೆಸಲು ವಿಶೇಷ ಟಾಸ್ಕ್ ಫೋರ್ಸ್ ನ್ನೂ ರಚನೆ ಮಾಡಲಾಗ್ತಿದೆ. ಸದ್ಯ ಎರಡು ವಾರ್ಡ್ ಗಳಲ್ಲಿ ಈ ಸಿಸ್ಟಮ್ ಜಾರಿ ಮಾಡಲಾಗಿದ್ದು, ನಗರದಾದ್ಯಂತ ಸರ್ವೇ ನಡೆಸ್ತೇವೆ ಅಂತಾ ಕಂದಾಯ ವಿಭಾಗದ ವಿಶೇಷ ಆಯುಕ್ತ ಆರ್. ಎಲ್ ದೀಪಕ್ ಹೇಳಿದ್ದಾರೆ.
ಇನ್ನು ಕೆಎಎಸ್ ಅಧಿಕಾರಿಯನ್ನೊಳಗೊಂಡ ವಿಶೇಷ ಕಾರ್ಯಪಡೆ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಡೇಟಾ ವೆರಿಫಿಕೇಶನ್ ಮಾಡಲಿದ್ದಾರೆ. ಬೆಸ್ಕಾಂ, ಬಿಡಬ್ಲ್ಯೂಎಸ್ ಎಸ್‌ಬಿಯಿಂದ ಪಡೆದ ಟ್ರೇಡ್ ಲೈಸೆನ್ಸ್ ಪರಿಶೀಲನೆ ನಡೆಯುತ್ತೆ. ಎಂತಹವರೇ ಆದ್ರೂ ಈ ಟ್ರ್ಯಾಕಲ್ ಸಿಸ್ಟಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳಲೇಬೇಕು. ಎರಡು ಪಟ್ಟು ದಂಡ ಮಾತ್ರವಲ್ಲದೇ ಬಡ್ಡಿ ಕೂಡ ಹಾಕಿ, ತೆರಿಗೆ ವಸೂಲಿ ಮಾಡ್ತೇವೆ ಅಂತಾ ಬಿಬಿಎಂಪಿ ಅಧಿಕಾರಿಗಳು ವಾರ್ನಿಂಗ್ ಕೊಟ್ಟಿದ್ದಾರೆ.
ಒಟ್ನಲ್ಲಿ ಇಷ್ಟೂ ದಿನ ಪಾಲಿಕೆಗೆ ಆಸ್ತಿ ತೆರಿಗೆ ವಂಚಿತರನ್ನು ಪತ್ತೆ ಹಚ್ಚೋದೇ ದೊಡ್ಡ ತಲೆ ನೋವಾಗಿತ್ತು.ಈಗ ತೆರಿಗೆ ವಂಚಿತರಿಗೆ ನಡುಕ ಶುರುವಾಗಿದ್ದು, ಮುಂದೆ ದಂಡ ಪ್ರಯೋಗವೂ ಆಗಲಿದೆ.