ರಾಮನಗರ: ಬಿಡದಿ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇಲ್ಲಿ ಬೃಹತ್ ಕೈಗಾರಿಕಾ ಪ್ರದೇಶ ಇದ್ದು ಪ್ರತಿಷ್ಠಿತ ಕಂಪನಿಗಳು ಕಾರ್ಖಾನೆಗಳು ತಲೆ ಎತ್ತಿವೆ. ಅಬ್ಬನಕುಪ್ಪೆ ಬಳಿ ಇರುವ 5-6 ಕಾರ್ಖಾನೆಗಳು ತ್ಯಾಜ್ಯವನ್ನ ಸಂಸ್ಕರಣೆ ಮಾಡದೆ ಹೊರ ಬಿಡುತ್ತಿವೆ. ಅಲ್ಲಿನ ಬೆಕ್ಕಾಂ, ಆಮ್ಕೊ, ಬ್ರಿಟಾನಿಯಾ, ಗಣೇಶ್ ಹರ್ಬಲ್, ಪ್ಯಾರಾಮೆಡಿಕಲ್ ಕಾರ್ಖಾನೆಗಳು ಹೀಗೆ ಮಾಡುತ್ತಿದೆ.ಈ ತ್ಯಾಜ್ಯ ಇಟ್ಟಮಡು ಗ್ರಾಮದ ಕೆರೆ ಸೇರುತ್ತಿದೆ. ಪರಿಣಾಮ ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಅಬ್ಬನಕುಪ್ಪೆಯ 19 ಹಾಗೂ 20ನೇ ವಾರ್ಡ್‌ನಲ್ಲಿ ಹಳ್ಳ ಹರಿದು ಹೋಗುವುದರಿಂದ ಇಲ್ಲಿನ ನಿವಾಸಿಗಳು ಸಹ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಅಂದ ಹಾಗೆ ಈ ಕಾರ್ಖಾನೆಗಳ ತ್ಯಾಜ್ಯದ ನೀರು ಹಳ್ಳದ ಮೂಲಕ ಕೆರೆ ಸೇರುತ್ತಿದೆ ಇದ್ರಿಂದಾಗಿ ಕೆರೆಯ ನೀರು ಕಲುಷಿತಗೊಂಡು ಗಬ್ಬೆದ್ದು ನಾರುತ್ತಿದೆ. ಅಲ್ಲದೆ, ಕೆರೆಯಲ್ಲಿದ್ದ ಸುಮಾರು 2 ಟನ್ ಗಳಷ್ಟು ಮೀನುಗಳು ಸಾವನ್ನಪ್ಪಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇತ್ತ ಕಾರ್ಖಾನೆಗಳು ತಮ್ಮಲ್ಲಿ ಬರುವ ತ್ಯಾಜ್ಯವನ್ನ ಸಂಗ್ರಹ ಮಾಡಿ ಮಳೆ ಬಂದು ಹಳ್ಳ ಹರಿಯುವ ಸಮಯದಲ್ಲಿ ರಾತ್ರಿ ವೇಳೆ ತ್ಯಾಜ್ಯವನ್ನ ಹಳ್ಳಕ್ಕೆ ಬಿಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಒಟ್ಟಾರೆ ಕಾರ್ಖಾನೆಗಳು ತಮ್ಮಲ್ಲಿ ಬರುವ ತ್ಯಾಜ್ಯವನ್ನು ಸಂಸ್ಕರಿಸದೆ ಜಾಣತನ ಪ್ರಯೋಗಿಸಿ ಮಳೆ ಬಂದಾಗ ಬಿಡುತ್ತಿವೆ. ಈ ಬಗ್ಗೆ ಕ್ರಮ ವಹಿಸಬೇಕಾದ ವಾಯು ಮಾಲಿನ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.