ಜಮ್ಮು ಮತ್ತು ಕಾಶ್ಮೀರದ ಮಕೇರ್ಕೋಟೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗವೊಂದರ ಭಾಗ ನೋಡ ನೋಡುತ್ತಿದ್ದಂತೆಯೇ ಕುಸಿದುಬಿದ್ದಿದೆ. ಮಣ್ಣು ಕಲ್ಲುಗಳ ಅವಶೇಷಗಳ ಅಡಿ ಸಿಲುಕಿದ ಕನಿಷ್ಠ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ ಎಂಟು ಮಂದಿಯ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ರಾಂಬನ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಈ ಅವಘಡ ನಡೆದಿದೆ.
ಗುರುವಾರ ರಾತ್ರಿಯೇ ಹೆದ್ದಾರಿಯಲ್ಲಿನ ಈ ಸುರಂಗದ ತುದಿ ಸ್ವಲ್ಪ ಕುಸಿದಿತ್ತು. ಶುಕ್ರವಾರ ಏಕಾಏಕಿ ಕುಸಿದಿದ್ದು, 13 ಕಾರ್ಮಿಕರು ಅದರ ಅಡಿಗೆ ಸಿಲುಕಿಕೊಂಡಿದ್ದರು. ಇದುವರೆಗೂ 4 ಕಾರ್ಮಿಕರ ಮೃತದೇಹ ಹೊರಗೆ ತೆಗೆಯಲಾಗಿದೆ. ಅವಘಡವನ್ನು ‘ಕುಸಿತ’ ಎಂದು ತಪ್ಪಾಗಿ ಹೇಳಲಾಗುತ್ತಿದೆ. ಇದು ಸುರಂಗದ ಒಂದು ತುದಿ ಜರುಗಿರುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
“ಖೂನಿನಲ್ಲಾ ಹೆಚ್ಚುವರಿ ಸುರಂಗದ ಸ್ಥಳದ ಒಳಗೆ ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ನಂಬಲಾಗಿರುವ ನಾಪತ್ತೆಯಾಗಿರುವ 9 ಕಾರ್ಮಿಕರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ಶನಿವಾರ ಬೆಳಿಗ್ಗೆ 5.30ಕ್ಕೆ ಆರಂಭವಾಗಿದೆ ಎಂದು ರಾಂಬನ್ ಉಪ ಆಯುಕ್ತ ಮುಸರತ್ ಉಲ್ ಇಸ್ಲಾಮ್ ಟ್ವೀಟ್ ಮಾಡಿದ್ದಾರೆ.
ಎನ್ಎಚ್ 44, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಕ್ಯೂಆರ್ಟಿ ಮತ್ತು ಸೇನೆಯನ್ನು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ರುವಾರ ರಾತ್ರಿ 10.15ರ ಸುಮಾರಿಗೆ ರಾಂಬನ್ ಜಿಲ್ಲೆಯ ಖೂನಿ ನಲ್ಲಾ ಸಮೀಪ ಹೆದ್ದಾರಿಯ ಹೆಚ್ಚುವರಿ ಸುರಂಗ ಕುಸಿದಿದ್ದು, ಸರ್ಲಾ ಕಂಪೆನಿಯ 13 ಕಾರ್ಮಿಕರು ಸಿಲುಕಿಕೊಂಡಿದ್ದರು. ಪಶ್ಚಿಮ ಬಂಗಾಳದ ಒಬ್ಬ ಕಾರ್ಮಿಕನ ಮೃತದೇಹ ಶುಕ್ರವಾರ ಪತ್ತೆಯಾಗಿತ್ತು. ಮೂವರನ್ನು ರಕ್ಷಿಸಲಾಗಿದೆ.
“ನಾವು ಇಂತಹ ದುರಂತವನ್ನು ನಿರೀಕ್ಷಿಸಿರಲಿಲ್ಲ. ಎರಡು ಯಂತ್ರಗಳು ಕೂಡ ಅಡಿಯಲ್ಲಿ ಸಿಲುಕಿವೆ. ಬಿರುಗಾಳಿ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆ ಉಂಟಾಗಿತ್ತು. ಇದರಿಂದ ಶುಕ್ರವಾರ 16- 17 ಗಂಟೆಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ