Thursday, January 23, 2025

ಮಳೆ ಅಬ್ಬರ: ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೆಚ್ಡಿಕೆ ಭೇಟಿ, ಪರಿಶೀಲನೆ

ಬೆಂಗಳೂರು: ನನ್ನ ಕಾಲದಲ್ಲಿ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ 750 ಕೋಟಿ ನೀಡಿದ್ದೆ ಆಮೇಲೆ ರಾಜಕೀಯ ಮಾಡಿ ಹಣ ವಾಪಸ್ಸು ಪಡೆದರು ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದರು.

ಮನೆಗಳಿಗೆ ಮಳೆ ನೀರು ನುಗ್ಗಿದ ಹಿನ್ನೆಲೆ ಇಂದು ಪೀಣ್ಯ ಕೈಗಾರಿಕಾ ಪ್ರದೇಶದ ಸಿದ್ದಾರ್ಥ ಕಾಲೋನಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಕೂಡ ಯಡಿಯೂರಪ್ಪ ಸಿಎಂ ಆಗಿದ್ದಾಗ ಭೇಟಿ ಮಾಡಿದ್ದೆ. ದಾಸರಹಳ್ಳಿ ಕ್ಷೇತ್ರದ ಹಣ ಬಿಡುಗಡೆ ಮಾಡಿ ಅಂತ ಹತ್ತು ಸಾರಿ‌ ಮನವಿ ಮಾಡಿದೆ. ಆಮೇಲೆ‌ ಶಾಸಕರು‌ ಕೂಡ ಪ್ರತಿಭಟನೆ ‌ಮಾಡಿದ್ರು ಆದ್ರೂ ಕೂಡ ಅನುದಾನ ಬಿಡುಗಡೆ ಆಗಿಲ್ಲ ಆದ್ರೆ ರಾಜರಾಜೇಶ್ವರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಬೇರೆ ಬೇರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ ಎಂದರು.

ಅಲ್ಲದೇ, ಹತ್ತು ವರ್ಷಗಳ ಕಾಲ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರ ಅಂತ ಗೊತ್ತು ಅದರ ದಾಖಲೆ ತೆಗೆಸಿ ಮಾತನಾಡುತ್ತೇನೆ. ದಾಸರಹಳ್ಳಿಯಲ್ಲಿ ರಾಜಕೀಯ ಕಾರಣಕ್ಕೆ ಹಣ ಬಿಡುಗಡೆ ಮಾಡಿಲ್ಲ. ಇಲ್ಲಿ ಯಾದಗಿರಿ ಮತ್ತು‌ ಬೀದರ್ ಭಾಗದ ಜನರು ವಾಸ ಮಾಡ್ತಾ ಇದ್ದಾರೆ. ಪಾಪ, ಮುಗ್ಧ ಜನರು ಅವರು, ಅವರಿಗೆ ಸರಿಯಾಗಿ ರಸ್ತೆ, ಚರಂಡಿ ಇಲ್ಲ. ಈಗ ಮೂವತ್ತು ಕೋಟಿ‌ ಬಿಡುಗಡೆ ಮಾಡಿದ್ದಾರೆ. ಇಷ್ಟ ದೊಡ್ಡ ಕ್ಷೇತ್ರಕ್ಕೆ ಮೂವತ್ತು ಕೋಟಿ ಎಲ್ಲಿ ಸಾಲುತ್ತೆ. 1600 ಕೋಟಿ ರಾಜಕಾಲುವೆಗೆ ಹಣ ಬಿಡುಗಡೆ ಮಾಡಿದ್ದೀರ. ಆದರೆ, ಕಾಮಗಾರಿ ನಡೆಯುತ್ತಿಲ್ಲ. ಯಾಕೆ ವಿಳಂಬ ಆಗಿದೆ ಎಂದು ಪ್ರಶ್ನೆ ಮಾಡಿದರು.

ಇನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಸಭೆ ಮಾಡಲು ಬಿಡಲಿಲ್ಲ. ಕಾಂಗ್ರೆಸ್ ‌ನಾಯಕರು ಸಭೆ ಮಾಡಲು ಬಿಡಲಿಲ್ಲ. ಕಾಂಗ್ರೆಸ್ ಸರ್ಕಾರ ಐದು ವರ್ಷ ಇತ್ತು. ಏನು ಅಭಿವೃದ್ಧಿ ‌ಮಾಡಿದ್ದೀರ. ಈಗ ಬಿಜೆಪಿ ಸರ್ಕಾರ ಇದೆ. ಮೂರು ವರ್ಷ ಆಗ್ತಾ ಬಂತು ಇವರು ಕೂಡ ಯಾವುದೇ ಅಭಿವೃದ್ಧಿ ‌ಮಾಡುತ್ತಿಲ್ಲ. ಅಲ್ಪ-ಸ್ವಲ್ಪ ಮಾನಮರ್ಯಾದೆ ಇದ್ರೆ ಬೆಂಗಳೂರು ಅಭಿವೃದ್ಧಿ ಮಾಡಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.

20 ವರ್ಷಗಳಿಂದ ರಾಜಕಾಲುವೆ ರಾಜಕಾಲುವೆ ಅಂತೀರಾ. ಎಷ್ಟು ದಿನ ಬೇಕು ರಾಜಕಾಲುವೆ ಅಭಿವೃದ್ಧಿ ಮಾಡಲು ನೀವು ಅಭಿವೃದ್ಧಿ ಆದ್ರೆ ಅಭಿವೃದ್ಧಿನಾ(?) ಜನಗಳಿಗೆ ಯಾವ ಅಭಿವೃದ್ಧಿ ಮಾಡಿದ್ದೀರಾ(?) 25 ಸಾವಿರ ಪರಿಹಾರ ಅಂದ್ರೆ ಅವರೇನು ಭಿಕ್ಷುಕರಾ(?) ಭಿಕ್ಷುಕರಿಗೂ ಮರ್ಯಾದೆ ಇದೆ ತಪ್ಪು ತಿಳಿದುಕೊಳ್ಳಬೇಡಿ. ಇಲ್ಲಿನ ಪ್ರದೇಶಕ್ಕೆ ನೀರು ನುಗ್ಗಿ ದಿನಸಿ ಹಾಳಾಗಿದೆ. ಇವರಿಗೆ 10-15 ಸಾವಿರ ಕೊಟ್ರೆ ಅವರು ಬದುಕು ಕಟ್ಟಿಕೊಳ್ಳಲು ಸಾಧ್ಯನಾ(?) ಎಂದು ಹೆಚ್ಡಿಕೆ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

RELATED ARTICLES

Related Articles

TRENDING ARTICLES