ಮಾಧ್ಯಮ ಸಮೂಹಗಳ ಮಾಜಿ ಒಡತಿ ಇಂದ್ರಾಣಿ ಮುಖರ್ಜಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಬುಧವಾರವೇ ಸುಪ್ರೀಂ ಕೋರ್ಟ್ ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡಿತ್ತು. ಜಾಮೀನು ಸಿಕ್ಕ ಬಳಿಕ ಮುಂಬೈ ಜೈಲಿನಿಂದ ಇಂದ್ರಾಣಿ ಮುಖರ್ಜಿ ಅವರಿಗೆ ಬಿಡುಗಡೆ ಸಿಕ್ಕಿದೆ.
2012ರಲ್ಲಿ ತನ್ನ ಮಗಳನ್ನೇ ಹತ್ಯೆಗೈದ ಆರೋಪ ಇಂದ್ರಾಣಿ ಮುಖರ್ಜಿ ಮೇಲಿದೆ. ಬುಧವಾರವೇ ಇಂದ್ರಾಣಿ ಮುಖರ್ಜಿ ಅವರಿಗೆ ಜಾಮೀನು ಸಿಕ್ಕಿತ್ತಾದರೂ, ಕಾಗದ ಪತ್ರ ವ್ಯವಹಾರ ಪೂರ್ಣವಾಗದ ಕಾರಣ, ಇಂದು ಜೈಲಿನಿಂದ ಬಿಡುಗಡೆಗೊಂಡರು. ಇದೀಗ ಜಾಮೀನು ಲಭ್ಯವಾಗುವ ಮೂಲಕ ಇಂದ್ರಾಣಿ ಮುಖರ್ಜಿ ಅವರ ಆರೂವರೆ ವರ್ಷಗಳ ಕಾರಾಗೃಹ ವಾಸಕ್ಕೆ ಬ್ರೇಕ್ ಬಿದ್ದಿದೆ. 2015ರಲ್ಲಿ ಇಂದ್ರಾಣಿ ಮುಖರ್ಜಿ ಅವರನ್ನು ಬಂಧಿಸಿ ಮುಂಬೈ ಜೈಲಿನಲ್ಲಿ ಇರಿಸಲಾಗಿತ್ತು. ವಿಶೇಷ ಸಿಬಿಐ ನ್ಯಾಯಾಲಯವು ಇಂದ್ರಾಣಿ ಮುಖರ್ಜಿ ಅವರಿಗೆ ಹಲವು ಬಾರಿ ಜಾಮೀನು ನಿರಾಕರಿಸಿತ್ತು. ಕಳೆದ ಫೆಬ್ರುವರಿಯಲ್ಲಷ್ಟೇ ಇಂದ್ರಾಣಿ ಮುಖರ್ಜಿ ಪರ ವಕೀಲರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಇಂದ್ರಾಣಿ ಮುಖರ್ಜಿ ಅವರು ಈಗಾಗಲೇ ಹಲವು ವರ್ಷಗಳ ಕಾಲ ಸುದೀರ್ಘ ಜೈಲು ವಾಸ ಅನುಭವಿಸಿರುವ ಹಿನ್ನೆಲೆಯಲ್ಲಿ ಜಾಮೀನು ನೀಡುತ್ತಿರೋದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ದೇಶ ಬಿಟ್ಟು ಹೋಗಬಾರದು ಹಾಗೂ ಯಾವುದೇ ಕಾರಣಕ್ಕೂ ಪ್ರಕರಣದ ಸಾಕ್ಷ್ಯಗಳನ್ನು ಸಂಪರ್ಕ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಇಂದ್ರಾಣಿ ಮುಖರ್ಜಿ ಅವರಿಗೆ ಷರತ್ತು ವಿಧಿಸಿ ಜಾಮೀನು ನೀಡಿದೆ.