ಜ್ಞಾನವಾಪಿ ಮಸೀದಿ ಬಳಿಕ ಮತ್ತೊಂದು ವಿವಾದ ಶುರುವಾಗಿದೆ. ಆದ್ರೆ, ಇದು ಕೂಡ ಹಿಂದೂಗಳಿಗೆ ಮತ್ತೊಂದು ಗೆಲುವು ಅನ್ನೋದು ವಿಶೇಷ. ಹೌದು, ಶ್ರೀಕೃಷ್ಣನ ಜನ್ಮಭೂಮಿ ವಿವಾದ ಅರ್ಜಿ ಸ್ವೀಕರಿಸಿದೆ ಕೋರ್ಟ್. ಶ್ರೀಕೃಷ್ಣ ಜನ್ಮಭೂಮಿ ಮಥುರಾದ ಕೇಶವದೇವ ದೇವಸ್ಥಾನಕ್ಕೆ ಸೇರಿದ ಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಈ ಮಸೀದಿಯನ್ನು ತೆರವುಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ವಿಚಾರಣೆಗೆ ಉತ್ತರ ಪ್ರದೇಶ ಕೋರ್ಟ್ ಸಮ್ಮತಿ ನೀಡಿದೆ.
ಕೃಷ್ಣ ಜನ್ಮಭೂಮಿ ಸಂಕೀರ್ಣವು 13.37 ಎಕರೆಗಳ ಪ್ರದೇಶದಲ್ಲಿದೆ. ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಶ್ರೀಕೃಷ್ಣನ ಜನ್ಮಸ್ಥಾನವೆಂದೇ ಪ್ರಸಿದ್ಧವಾಗಿದೆ ಮಥುರಾ. 17ನೇ ಶತಮಾನಕ್ಕಿಂತ ಮುಂಚೆ ಇದ್ದ ಕೇಶವ ದೇವಾಲಯ ಕೆಡವಿ ಶಾಹಿ ಮಸೀದಿ ನಿರ್ಮಾಣ ಮಾಡಿದ್ದಾರೆಂದು ಅರ್ಜಿದಾರರು ವಾದಿಸಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ಹಿಂದೂ ಸಂಘಟನೆಗಳು ವಾದ ಮಂಡಿಸಿದ್ದವು.
1670ರಲ್ಲಿ ಮೊಘಲ್ ದೊರೆ ಔರಂಗಜೇಬ್‌ನಿಂದ ದೇವಾಲಯ ಉಡೀಸ್ ಮಾಡಲಾಗಿದೆ. ಜೊತೆಗೆ, ಕೇಶವ ದೇವಾಲಯದ ತಳಪಾಯದ ಮೇಲೆಯೇ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ. ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸೇರಿದಂತೆ ಅನೇಕ ಕರುಹು ಪತ್ತೆಯಾಗಿದ್ದು, ಆದಾದ ಬಳಿಕ ಪ್ರಕರಣ ಭಾರಿ ಮಹತ್ವ ಪಡೆದುಕೊಂಡಿದೆ. ಇದೀಗ, ಕೃಷ್ಣ ಜನ್ಮಭೂಮಿ ವಿಚಾರ ಭಾರಿ ಸದ್ದು ಮಾಡ್ತಿದೆ.
ಇತ್ತ, ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸದಂತೆ ವಾರಣಾಸಿಯ ಸಿವಿಲ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೂ ವಿಚಾರಣೆ ಮುಂದುವರಿಸದಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ. ಪ್ರಕರಣದ ವಿಚಾರಣೆಯನ್ನು ಶುಕ್ರವಾರವೇ ಕೈಗೆತ್ತಿಕೊಳ್ಳುವಂತೆ ವಕೀಲ ವಿಷ್ಣು ಶಂಕರ್ ಜೈನ್ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಸೀದಿ ಆಡಳಿತ ಸಮಿತಿ ಪರ ವಕೀಲ ಹುಝೆಫಾ ಅಹ್ಮದಿ, ವಿವಿಧ ಮಸೀದಿಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ವಾರಾಣಸಿಯ ಜ್ಞಾನವಾಪಿ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ, ‘ವಝುಖಾನ’ ಸುತ್ತಲಿನ ಗೋಡೆ ಕೆಡವಲು ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಕೀಲರ ಅನಾರೋಗ್ಯದ ಆಧಾರದ ಮೇಲೆ ವಿಚಾರಣೆ ಮುಂದೂಡಿಕೆಯನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಹಿಂದೂ ಭಕ್ತರು ಸಿವಿಲ್ ನ್ಯಾಯಾಲಯದ ವಿಚಾರಣೆಯನ್ನು ಮುಂದುವರಿಸುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಅಹ್ಮದಿ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಿಂದೂ ಪರ ವಕೀಲ ವಿಷ್ಣು ಜೈನ್, ವಾರಣಾಸಿಯ ಸಿವಿಲ್ ನ್ಯಾಯಾಲಯದಲ್ಲಿ ಹಿಂದೂ ಕಕ್ಷಿದಾರರು ವಿಚಾರಣೆಯನ್ನು ಮುಂದುವರಿಸುವುದಿಲ್ಲ ಎಂದು ಭರವಸೆ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠವು ಶುಕ್ರವಾರದವರೆಗೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸದಂತೆ ಸಿವಿಲ್ ನ್ಯಾಯಾಲಯಕ್ಕೆ ಆದೇಶ ನೀಡಿತು. ಈಗಾಗಲೇ 10ರಿಂದ12 ಪುಟಗಳಷ್ಟು ಸರ್ವೇ ವರದಿಯನ್ನು ನೀಡಲಾಗಿದೆ.
ಒಟ್ನಲ್ಲಿ, ಜ್ಞಾನವಾಪಿ ಮಸೀದಿ ಕೇಸ್ ಇನ್ನೂ ಕೋರ್ಟ್‌ನಲ್ಲಿರುವಾಗಲೇ ಇದೀಗ ಕೃಷ್ಣ ಜನ್ಮಭೂಮಿ ವಿಚಾರ ಕೂಡ ಸದ್ದು ಮಾಡ್ತಿದೆ. ಜ್ಞಾನವಾಪಿಯಲ್ಲಿ ಈಗಾಗಲೇ ಶಿವಲಿಂಗ ಸೇರಿ ಹಲವು ಹಿಂದೂ ಕುರುಹುಗಳು ದೊರಕಿದ್ದು, ಬಹಳ ಮಹತ್ವ ಪಡೆದಿದೆ. ಇನ್ನು, ಕೇಶವ ದೇವಾಲಯದ ತಳಪಾಯದ ಮೇಲೆಯೇ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನೋ ವಿಚಾರದಲ್ಲೂ ಕೋರ್ಟ್ ವಿಚಾರಣೆ ನಡೆಸಲಿದೆ.