ಬೆಂಗಳೂರು: ಈ ಗೋಳು ಮುಗಿಯಲ್ಲ ಬಿಡಿ. ಮಳೆ ಬಂದ್ರೆ ಇದ್ದಿದ್ದೇ ಈ ಪರಿಸ್ಥಿತಿ ಅಂತ ಹಿಡಿಶಾಪ ಹಾಕ್ತಿದ್ದಾರೆ ಜನ. ಹೌದು, ರಾಜ್ಯದಲ್ಲಿ ಇನ್ನು ನೈಜ ಮಳೆಗಾಲವೇ ಶುರುವಾಗಿಲ್ಲ. ಆದ್ರೂ, ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದೆ. ಒಂದೇ ದಿನದ ರಣಭೀಕರ ಮಳೆಗೆ ಸಿಲಿಕಾನ್ ಸಿಟಿ ಸಂಪೂರ್ಣ ತತ್ತರಗೊಂಡಿದೆ. ಹೊಂಡ, ಕೆರೆಗಳಂತಾಗಿ ಗಾರ್ಡನ್ ಸಿಟಿಯ ರಸ್ತೆಗಳು.
ಬೆಂಗಳೂರಿನಲ್ಲಿ ದಾಖಲೆಯ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ ಮನೆಗಳಿಗೆ ನೀರು ನುಗ್ಗಿ ಜನ ಬೀದಿಗೆ ಬಂದಿದ್ದಾರೆ. ಮಳೆಯ ಹೊಡೆತಕ್ಕೆ ನಲುಗಿ ಹೋಗಿರುವ ನಗರವಾಸಿಗಳ ಸ್ಥಿತಿಗತಿಗಳನ್ನ ಪರಿಶೀಲನೆ ಮಾಡಲು ಖುದ್ದು ಸಿಎಂ ಸಿಟಿ ರೌಂಡ್ಸ್ ಬಂದಿದ್ರು. ಆದ್ರೆ ಏನ್ ಪ್ರಯೋಜನ..? ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕಾಟಾಚಾರಕ್ಕೆ ಒಂದೆರಡು ಕಡೆ ಜನರ ಜೊತೆಗೆ ಮಾತನಾಡಿ ರೌಂಡ್ಸ್ ಮುಗಿಸಿದ್ರು.
ಬೆಂಗಳೂರಿನ ಎಂಟು ವಲಯಗಳಲ್ಲೂ ಮನೆಗಳಿಗೆ ನೀರು ನುಗ್ಗಿ ಎರಡ್ಮೂರು ದಿನಗಳ ಕಾಲ ಜನರು ಜಾಗರಣೆ ಮಾಡಿದ್ರು. ಗರ್ಭಿಣಿಯರು, ವಯಸ್ಸಾದವರು, ಮಕ್ಕಳು ಪರದಾಡಿದ್ರು. ಆದ್ರೆ ಅಂತಹ ಸ್ಥಳಕ್ಕೆ ಭೇಟಿಕೊಡಬೇಕಿದ್ದ ನಾಡದೊರೆ ಬಸವರಾಜ್ ಬೊಮ್ಮಾಯಿ, ಮಹಾಲಕ್ಷ್ಮಿ ಪುರಂ ವಿಧಾನಸಭಾ ಕ್ಷೇತ್ರದ ಜೆ.ಸಿ.ನಗರ, ಕಮಲಾನಗರ ಮುಖ್ಯ ರಸ್ತೆಯ ಶಂಕರಮಠ ದೇವಸ್ಥಾನದ ಹತ್ತಿರ ಇರುವ ಮಳೆ ನೀರು ಕಾಲುವೆಗಳ ಹೂಳು ತೆಗೆದಿರುವುದು, ಲಗ್ಗರೆ, ಸ್ವರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಮೆಟ್ರೋ ಕಾಮಗಾರಿ, ನಾಗವಾರ ಮೆಟ್ರೋ ಸ್ಟೇಷನ್ ಹಾಗೂ ಹೆಬ್ಬಾಳ ಎಸ್‌ಟಿಪಿ 100 ಎಂಎಲ್ ಡಿ ಕಾಮಗಾರಿಯನ್ನ ವೀಕ್ಷಿಸುವ ಮೂಲಕ ಒಂದೆರೆಡು ಕಡೆ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಒಂದೆರಡು ಕಡೆ ಸಂತ್ರಸ್ತರ ಸಮಸ್ಯೆ ಆಲಿಸಿದ್ರು. ಹಾಗೇ ಅಲ್ಲಲ್ಲಿ ಜನರು ಆಕ್ರೋಶವನ್ನು ಹೊರಹಾಕಿದ್ರು.
ಇನ್ನೂ ಕಾಟಾಚಾರಕ್ಕೆ ಸಿಟಿ ರೌಂಡ್ಸ್ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತಾನಾಡಿದ ಸಿಎಂ, ಮುಖ್ಯ ಕಾಲುವೆಗಿಂತ ಕೆಳಗಡೆ ಮನೆ ಕಟ್ಟಿದಾಗಲೂ ಈ ಸಮಸ್ಯೆ ಆಗುತ್ತಿದೆ. ಅಕ್ರಮವಾಗಿ ಕಟ್ಟಡಗಳಿಂದಲೂ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ಕಾಲುವೆಗಳನ್ನು ದುರಸ್ತಿ ಮಾಡುವುದಕ್ಕೆ 1600 ಕೋಟಿ ಬಿಡುಗಡೆ ಮಾಡಲಾಗಿದೆ ಎಂದ್ರು.
ಇನ್ನೂ ಮಳೆಯಿಂದಾಗಿ ಬೆಂಗಳೂರಿನ ವೀಕ್ಷಣೆ ಮುಗಿಸಿದ ಬಳಿಕ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಸಿದ ಸಿಎಂ, ಸಭೆಯಲ್ಲಿ ಅಧಿಕಾರಿಗಳ ಮೇಲೆ ಫುಲ್ ಗರಂ ಆಗಿದ್ದಾರೆ. ರಾಜಕಾಲುವೆಗಳ ಹೂಳು ತೆಗೆದಿಲ್ಲ, ಅದಕ್ಕಾಗಿಯೇ ಮೊನ್ನೆ ಅಷ್ಟೊಂದು ಸಮಸ್ಯೆ ಆಗಿದೆ. ರಾಜಕಾಲುವೆಗಳಲ್ಲಿ ಹೂಳು ತೆಗೆಯಲು ಯಾರ ಅನುಮತಿ ಪಡೆಯಬೇಡಿ, ನಾನೇ ಹೇಳ್ತಿದ್ದೀನಿ ಮೊದಲು ಹೂಳು ತೆಗೆಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಇನ್ನು, ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯಸ್ಥೆ ಸುಗುಣ ಎತ್ತಂಗಡಿಗೆ ಸಿಎಂ ಸೂಚನೆ ನೀಡಿದ್ರು.
ಅತ್ತ, ಸಿಎಂ ಬೊಮ್ಮಾಯಿ ಕಾಟಾಚಾರಕ್ಕೆ ಸಿಟಿ ರೌಂಡ್ಸ್ ಮಾಡಿದ್ರೆ, ಈ ವಿಪಕ್ಷದವರದ್ದೂ ಅದೇ ಕಥೆ. ಮಾಜಿ ಸಿಎಂ ಸಿದ್ದರಾಮಯ್ಯ ರೌಂಡ್ಸ್ ಹೋಗಿದ್ರು ಸಿಕ್ಕಾಪಟ್ಟೆ ಜನ ಸೇರಿದ್ರು ಅವರ ಮಧ್ಯೆ ಒಂದು ಟೇಬಲ್ ಹಾಕಿ ಕೂತ ಸಿದ್ದು, ಬಿಸಿ ಬಿಸಿ ಟೀ ಜೊತೆಗೆ ಬಿಸ್ಕೇಟ್ ತಿಂದು ಬಂದ್ರು.
ಹೊಟ್ಟೆಗೆ ಹಿಟ್ಟಿಲ್ಲ, ಮಲಗಲು ಸೂರಿಲ್ಲ ಇಂತಹ ಸಂದರ್ಭದಲ್ಲಿ ಜನರ ಪರವಾಗಿ ನಿಲ್ಲಬೇಕಿದ್ದ ಜನಪ್ರತಿಗಳು ಹಾಗೂ ಸರ್ಕಾರ ಇದ್ರೂ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ವರ್ತಿಸುತ್ತಿದ್ದಾರೆ. ಈ ಸರ್ಕಾರದ ಧೋರಣೆ ಯಿಂದ ಜನರ ಕೋಪ ನೆತ್ತಿಗೆರುವಂತೆ ಮಾಡಿದ್ದು, ಕೊಟ್ಟ ಭರವಸೆಯಂತೆ ಪರಿಹಾರದ ಹಣ ಸಂತ್ರಸ್ತರ ಕೈ ಸೇರುತ್ತಾ ಅಂತ ಕಾದು ನೋಡ್ಬೇಕು. ಒಂದೆರಡು ದಿನದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡ ಸಿಟಿ ರೌಂಡ್ಸ್ ಹಾಕೋದಾಗಿ ಹೇಳಿ ನಮ್ಮದು ಕಾಟಾಚಾರದ ಭೇಟಿ ಅಲ್ಲ ಅಂದಿದ್ದಾರೆ. ರಾಜಕಾರಣಿಗಳ ಸಿಟಿ ರೌಂಡ್ಸ್ ಎಷ್ಟರಮಟ್ಟಿಗೆ ಜನರಿಗೆ ಅನುಕೂಲ ಆಗುತ್ತೆ ಅನ್ನೋದನ್ನ ನೋಡಬೇಕಿದೆ