Friday, November 22, 2024

ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

ಪಂಜಾಬ್​​:  ಮೂರು ದಶಕಗಳ ಹಿಂದಿನ ರಸ್ತೆ ಜಗಳ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ಇಂದು ಸುಪ್ರೀಂಕೋರ್ಟ್ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಇದು ಕಠಿಣ ಕಾರಾಗೃಹ ಶಿಕ್ಷೆಯಾಗಿರಲಿದೆ ಎಂದು ಕೋರ್ಟ್ ತೀರ್ಪು ನೀಡಿದೆ.

1988ರಲ್ಲಿ ನಡೆದ ರಸ್ತೆ ಕಲಹದಲ್ಲಿ ಪಟಿಯಾಲದ ನಿವಾಸಿ ಗುರ್ನಾಮ್ ಸಿಂಗ್ ಎಂಬುವವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 2018ರ ಮೇ ತಿಂಗಳಲ್ಲಿ ಅವರನ್ನು ದೋಷಮುಕ್ತಗೊಳಿಸಿ ನೀಡಿದ್ದ ತನ್ನ ಆದೇಶವನ್ನು ಮರು ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್, ಪರಿಷ್ಕೃತ ತೀರ್ಪು ನೀಡಿದೆ.

ಆದೇಶದ ಪ್ರಕಾರ ಸಿಧು ಅವರನ್ನು ಪಂಜಾಬ್ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಈ ಹಿಂದೆ ಸಿಧು ಅವರಿಗೆ ಕೇವಲ 1000 ರೂ ದಂಡ ವಿಧಿಸಿ, ಬಂಧನದಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಈಗ ಐಪಿಸಿ ಸೆಕ್ಷನ್ 323ರ ಅಡಿ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಸಿಧು ಅವರು ಖಂಡನಾರ್ಹ ನರಹತ್ಯೆ ಮಾಡಿದ್ದಾರೆ ಎಂದು ಪರಿಣಿಸಿದ್ದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅದರ ವಿರುದ್ಧದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್, 2018ರ ಮೇ 15ರಂದು ಆದೇಶವನ್ನು ರದ್ದುಗೊಳಿಸಿತ್ತು. ಆದರೆ, ಹಿರಿಯ ನಾಗರಿಕರಿಗೆ ಗಾಯ ಉಂಟುಮಾಡಿದ್ದರಲ್ಲಿ ಅವರು ತಪ್ಪಿತಸ್ಥ ಎಂದು ಹೇಳಿತ್ತು.

65 ವರ್ಷದ ವ್ಯಕ್ತಿಗೆ ನವಜೋತ್ ಸಿಂಗ್ ಸಿಧು ಸ್ವಯಂಪ್ರೇರಣೆಯಿಂದ ಹಲ್ಲೆ ನಡೆಸಿ ಹಾನಿ ಮಾಡಿದ್ದಾರೆ ಎಂದು ಕೋರ್ಟ್ ಪರಿಗಣಿಸಿದ್ದರೂ, ಅವರಿಗೆ ಜೈಲು ಶಿಕ್ಷೆ ವಿಧಿಸದೆ 1,000 ರೂ ದಂಡ ಮಾತ್ರ ವಿಧಿಸಿತ್ತು. ಮೃತ ವ್ಯಕ್ತಿಯ ಕುಟುಂಬದವರು ಇದರ ವಿರುದ್ಧ ಸಲ್ಲಿಸಿದ್ದ ಪರಾಮರ್ಶೆ ಅರ್ಜಿಯನ್ನು ವಿಚಾರಣೆ ನಡೆಸಲು 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಒಪ್ಪಿಕೊಂಡು, ಸಿಧು ಅವರಿಗೆ ನೋಟಿಸ್ ನೀಡಿತ್ತು.

RELATED ARTICLES

Related Articles

TRENDING ARTICLES