ಚಾಮರಾಜನಗರ : ರಾಜ್ಯದೆಲ್ಲೆಡೆ ಮಳೆ ಆರ್ಭಟ ಜೋರಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ವರುಣಾರ್ಭಟ ಶುರುವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲೆಡೆ ಉತ್ತಮ ಮಳೆಯಿಂದಾಗಿ ಗಿರಿ ಶಿಖರಗಳು ಹಚ್ಚಹರಿಸಿನಿಂದ ಕಂಗೊಳಿಸುತ್ತಿದೆ.
ಜಿಲ್ಲೆಯ ಕೊಳ್ಳೆಗಾಲದ ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮೋಡಗಳು ಸೃಷ್ಟಿಸಿರುವ ಮಾಯೆ ನೋಡುವುದಕ್ಕೆ ಕಣ್ಣೆರಡು ಸಾಲದು. ಸದ್ಯ ರಾಜ್ಯದಲ್ಲಿ ಜನ ಭಾರೀ ಮಳೆಗೆ ಹೈರಾಣಾಗಿದ್ದಾರೆ. ಆದರೆ ಚಾಮರಾಜನಗರದಲ್ಲಿ ಕಂಡು ಬಂದ ಮೋಡಗಳ ದೃಶ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದಟ್ಟಕಾಡಿನ ನಡುವೆ ವನ್ಯ ಪ್ರಾಣಿಗಳ ಜೊತೆ ಇದೀಗ ಆಕಾಶವೇ ಧರಗಿಳಿದ ಅನುಭವ ಪಡೆದ ಪ್ರವಾಸಿಗರು
ಮಳೆಯ ನಡುವೆ ಹಚ್ಚ ಹಸಿರಿನ ಕಾಡಿನ ಮಧ್ಯೆ ಬೆಳ್ಳಿಯ ಲೇಪನದಂತೆ ಮೋಡಗಳು ಕಂಗೊಳಿಸಿದೆ. ಸೃಷ್ಟಿಯಾದ ಈ ಮನಮೋಹಕ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆರೆಯಂತಾದ ರಸ್ತೆಗಳು :
ಇನ್ನು ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದೆ. ಗಡಿ ಜಿಲ್ಲೆ ಚಾಮರಾಜನಗರ, ತಮಿಳುನಾಡಿನ ತಾಳವಾಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರಾತ್ರಿಯಿಡೀ ನಿರಂತರ ಮಳೆ ಸುರಿದಿದೆ. ರಸ್ತೆ ಮೇಲೆ ಮಳೆ ನೀರು ನದಿಯಂತೆ ಹರಿಯುತ್ತಿತ್ತು. ರಸ್ತೆಯಲ್ಲಿ ನೀರು ಹರಿಯುತ್ತಿದ್ರಿಂದ ವಾಹನ ಸವಾರರು ಪರದಾಡುವಂತಾಯ್ತು. ಹಲವು ವರ್ಷಗಳ ನಂತರ ಬಿದ್ದ ಭಾರಿ ಮಳೆಗೆ ಎಲ್ಲಾ ಕೆರೆ-ಕಟ್ಟೆಗಳು ಭರ್ತಿಯಾಗಿವೆ..
ಇನ್ನು, ರಾತ್ರಿಯಿಡೀ ಬಿದ್ದ ಗುಡುಗು ಸಹಿತ ಮಳೆ, ಅನೇಕ ಬೆಳೆಗಳಿಗೂ ಹಾನಿಯಾಗಿದ್ದು, ಅನೇಕ ಗ್ರಾಮಗಳಿಗೆ ಬೆಳಗ್ಗೆವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.