ಶಿವಮೊಗ್ಗ : ನಮ್ಮ ಸಚಿವರು, ಸರ್ಕಾರ, ನಮ್ಮ ಸರ್ಕಾರಿ ಶಾಲೆಗಳು ಹಾಗೆ ಇವೆ. ಹೀಗೆ ಇವೆ. ಒಳ್ಳೆಯ ಶಿಕ್ಷಣ ಇದೆ. ಸುಸಜ್ಜಿತ ಕಟ್ಟಡ ಇದೆ. ಕಂಪ್ಯೂಟರ್ ಕೊಟ್ಟಿದಿವಿ. ಒಳ್ಳೆಯ ವಾತಾವರಣ ಇದೆ. ಹಾಗೆ, ಹೀಗೆ ಅಂತಾ ಹೇಳುತ್ತಲೇ ಇರುತ್ತಾರೆ. ಆದ್ರೆ, ಇಲ್ಲೊಂದು ಶಾಲೆ ಇದೆ. ಈ ಶಾಲೆ ದುರಾವಸ್ಥೆ ನೋಡಿದ್ರೆ ನೀವು ಏನ್ ಹೇಳ್ತಿರೋ ಗೊತ್ತಿಲ್ಲ. ಈ ಶಾಲಾ ಕಟ್ಟಡದೊಳಗೆ ವಿದ್ಯಾರ್ಥಿಗಳು ಬರುವಂತೆಯೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿ ಹಾವು, ಇಲಿ, ಹೆಗ್ಗಣಗಳಂತೂ ಓಡಾಡಿಕೊಂಡಿವೆ.
ಇನ್ನೇನು, ರಾಜ್ಯದಲ್ಲಿ ಶಾಲೆಗಳೆಲ್ಲಾ ಆರಂಭಗೊಂಡಿವೆ. ಮಕ್ಕಳು ಕೂಡ ಶಾಲೆಗಳತ್ತ ಖುಷಿ, ಖುಷಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದ್ರೆ, ಈ ಸರ್ಕಾರಿ ಶಾಲೆಗೆ ಮಾತ್ರ, ವಿದ್ಯಾರ್ಥಿಗಳು ಬರುವ ಹಾಗೆಯೇ ಇಲ್ಲ. ಯಾಕಂದ್ರೆ, ಈ ಸರ್ಕಾರಿ ಶಾಲೆಯ ದುಸ್ಥಿತಿ ಈ ರೀತಿ ಇದೆ.
ಮಕ್ಕಳು ಕೂಡ ಶಾಲೆಗಳತ್ತ ಖುಷಿ, ಖುಷಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದ್ರೆ, ಶಿವಮೊಗ್ಗದ ನ್ಯೂ ಮಂಡ್ಲಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳ ಸಂಕಷ್ಟ ಕೇಳೋರಿಲ್ಲ. ಕಟ್ಟಡದೊಳಗೆ ಹೊಕ್ಕಿದರೆ ಸಾಕು, ನರಕ ಸದೃಶ ಎದುರಾಗುತ್ತೆ. ಈ ಶಾಲೆಯ ಕಟ್ಟಡ ಕುಸಿದು ಹೋಗಿದೆ. ಮಳೆ ಬಂದು ಆವರಣದಲ್ಲಿ ನೀರು ನಿಂತಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಇಲ್ಲಿ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಟ್ಟಡದೊಳಗಂತೂ, ಮಕ್ಕಳು ಕೂರಲು ಅಲ್ಲ, ನಿಲ್ಲಲು ಕೂಡ ಆಗದಂತಹ ಪರಿಸ್ಥಿತಿ ಇದೆ.ಶಾಲಾ ಕೊಠಡಿಯಲ್ಲಿ, ಹೆಗ್ಗಣಗಳು ಬಿಲ ಕೊರೆದಿದ್ದು, ಹಾವು, ಇಲಿ, ಹೆಗ್ಗಣಗಳು ಓಡಾಡಿಕೊಂಡಿರುತ್ತವೆ. ಇಷ್ಟಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ.
ಇನ್ನು ಈ ಶಾಲೆಯಲ್ಲಿ, 1 ರಿಂದ 7 ನೇ ತರಗತಿಯವರೆಗೆ ಸುಮಾರು 170 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಗಳು ಆರಂಭಗೊಂಡಿದ್ದರೂ, ಮಕ್ಕಳಿಗೆ ಇಲ್ಲಿ ತರಗತಿ ನಡೆಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಸಮೀಪವೇ ಇರುವ ಮಠದಲ್ಲಿ ತರಗತಿ ನಡೆಸಲು ಅನುಮತಿ ಕೇಳಲಾಗಿದೆ. ಇದರಿಂದ ಕೆರಳಿದ ಪೋಷಕರು, ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ್ರು.
ಒಟ್ಟಾರೆ, ಸರ್ಕಾರಿ ಶಾಲೆಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಸಚಿವರು, ಶಾಸಕರು, ಅಧಿಕಾರಿಗಳು ಇತ್ತ ಲಕ್ಷ್ಯ ವಹಿಸಿ ಬಡವರ ಮಕ್ಕಳ ಹಿತ ಕಾಯಬೇಕಿದೆ.