ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ರಾತ್ರಿ ಸುರಿದ ಭಾರೀ ಮಳೆಗೆ ರಾಜಧಾನಿ ಅಕ್ಷರಶಃ ತೊಯ್ದು ತೊಪ್ಪೆಯಾಗಿದೆ. ರಾಜಧಾನಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ರೆ. ನೂರಾರು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಮಳೆಯಿಂದಾಗಿ ಬೆಂಗಳೂರಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು.
ಎಡಬಿಡದೇ ಸುರಿದ ಮಳೆಯಿಂದಾಗಿ ನಗರದ ಅಂಡರ್ ಪಾಸ್ಗಳು, ಬಸ್ ಸ್ಟಾಪ್ಗಳು, ಮೆಟ್ರೋ ಸ್ಟೇಷನ್ಗಳು ಸೇರಿದಂತೆ ಕೆಲ ರಸ್ತೆಗಳು ಸಂಪೂರ್ಣ ಮುಳುಗಿ ಹೋಗಿದ್ವು. ಮಳೆಯಿಂದಾಗಿ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಹೊರಮಾವುವಿನಲ್ಲಿ ಅತ್ಯಧಿಕ 155 ಮಿಮೀ ಮಳೆಯಾಗಿದ್ರೆ ಯಲಹಂಕದಲ್ಲಿ 129 ಮಿಮೀ, ವಿದ್ಯಾಪೀಠ 127 ಮಿಮೀ, ರಾಜಮಹಲ್ ಗುಟ್ಟಹಳ್ಳಿ 122 ಮಿಮೀ ಮಳೆಯಾಗಿದೆ. ಸಂಪಂಗಿರಾಮನಗರದಲ್ಲಿ 119 ಮಿಮೀ, ದಾಸರಹಳ್ಳಿ 110 ಮಿಮೀ, ವಿದ್ಯಾರಣ್ಯಪುರ 109 ಮಿಮೀ, ದೊಡ್ಡನೆಕ್ಕುಂದಿ 108 ಮಿಮೀ, ಬಾಣಸವಾಡಿ 106 ಮಿಮೀ, ಜಕ್ಕೂರು 102 ಮಿಮೀ ಮಳೆಯಾಗಿದೆ. ಆರ್.ಆರ್.ನಗರ, ಆವಲಳ್ಳಿ, ಮಲ್ಲೇಶ್ವರಂ, ಶಾಂತಿನಗರ ಸೇರಿ ಹಲವು ಏರಿಯಾಗಳಲ್ಲಿ ರಸ್ತೆಗಳು ಕೆರೆಗಳಂತಾಗಿದ್ದು ಕಾರು, ಬೈಕ್ ಗಳು ನೀರಿನಲ್ಲಿ ತೇಲುತ್ತಿದ್ದವು.. ಮಲ್ಲೇಶ್ವರದ ದತ್ತಾತ್ರೇಯ ದೇವಸ್ಥಾನದ ಬಳಿ ರಾಜಕಾಲುವೆಯ ನೀರು ನುಗ್ಗಿ ಗೋಡೆ ಕುಸಿದಿದ್ದು, ರಾತ್ರಿ ಇಡೀ ಜನರು ನೀರಿನಲ್ಲೆ ಇರುವ ಹಾಗಾಗಿತ್ತು.
ಇನ್ನು, ಡಾಲರ್ಸ್ ಕಾಲೋನಿಯಲ್ಲಿ ಅವಾಂತರವಾಗಿದ್ದು, ಮಾಜಿ ಸಿಎಂ ಬಿಎಸ್‌ವೈ ಮನೆ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಲಹರಿ ವೇಲು ನಿವಾಸದ ಬೇಸ್‌ಮೆಂಟ್ ಜಲಾವೃತವಾಗಿದೆ. ಇನ್ನು, ಮಲ್ಲೇಶ್ವರದ 18 ಕ್ರಾಸ್ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿವೆ. ಇನ್ನೂ ಹೊರಮಾವು ವಾಡ್೯ ನ ಸಾಯಿ ಲೇಔಟ್ ನ ಸ್ಥಿತಿ ಚಿಂತಾಜನಕವಾಗಿದ್ದು, ಸತತ ನಾಲ್ಕು ವರ್ಷಗಳಿಂದ ಅಕ್ಷರಶಃ ತತ್ತರಿಸುವಂತಾಗಿದೆ.
ಇನ್ನು, ಮಹಾಮಳೆಗೆ ಬೆಂಗಳೂರಿನಲ್ಲಿ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಉಲ್ಳಾಳ ಉಪನಗರದಲ್ಲಿ ನಡೆಯುತ್ತಿದ್ದ ಪೈಪ್ ಲೈನ್ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ರೆ ಓರ್ವ ಕಾರ್ಮಿಕ ಸೇಫ್ ಆಗಿದ್ದಾನೆ.
ಮಳೆ ಅವಾಂತರಗಳ ಬಗ್ಗೆ ಮಾತ್ನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಡಿಮೆ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬಂದಿದೆ. ಹೀಗಾಗಿ ಹೆಚ್ಚು ಪ್ರಾಬ್ಲಂ ಆಗಿದೆ. ಬಿಬಿಎಂಪಿಯ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು, ಫೈಯರ್ ಪೋರ್ಸ್, SDRF ಎಲ್ಲರೂ ರಕ್ಷಣಾ ಕಾರ್ಯ ನಡೆಸಿದ್ದಾರೆ. ಹೆಚ್ಚಿನ ಮಳೆಯಾಗೋ ಮಾಹಿತಿ ಇರೋದ್ರಿಂದ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂದರು.
ಒಟ್ನಲ್ಲಿ ಬೆಂಗಳೂರಲ್ಲಿ ಮಳೆ ಬಂದಾಗಲೆಲ್ಲಾ ಇದೇ ಸಮಸ್ಯೆ ಉದ್ಭವವಾಗುತ್ತದೆ. ಬಿಬಿಎಂಪಿಗೆ ದೂರು ಕೊಟ್ರೂ ಅಧಿಕಾರಿಗಳು ಮಾತ್ರ ಕ್ರಮಕೈಗೊಳ್ಳುತ್ತಿಲ್ಲ. ನಮ್ಮ ಗೋಳು ಕೇಳೋರೆ ಇಲ್ಲ ಅಂತ ಸ್ಥಳೀಯ ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿದ್ರೆ. ಇತ್ತ ಮಳೆ ಪರಿಣಾಮದ ಸಮಸ್ಯೆಗಳಿಗೆ ಬಿಬಿಎಂಪಿ ಹಾಗೂ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕಿದೆ.