ಬೆಂಗಳೂರು : ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದಾನೆ. ನಿನ್ನೆ ರಾತ್ರಿ ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಮಳೆ ಭಾರಿಯಾಗಿದ್ದು ಬೃಹತ್ ಮರಗಳು ಧರೆಗುರುಳಿವೆ.
ರಾತ್ರಿ ಸುರಿದ ಧಾರಾಕಾರ ಮಳೆಗೆ ದತ್ತಾತ್ರೇಯ ನಗರದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ನಗರದ ರಾಜಕಾಲುವೆ ಅಕ್ಕ-ಪಕ್ಕ ಇರೋ ಮನೆಗಳ ಗೋಡೆ ಕುಸಿದಿದೆ. ಮಳೆಯ ಪ್ರವಾಹದಿಂದ ಜಾನುವಾರುಗಳ ಜೀವನವೂ ಅಸ್ತವ್ಯಸ್ತಗೊಂಡಿತ್ತು.
ಇನ್ನು R.R.ನಗರದಲ್ಲಿ ಸುರಿದ ಭಾರಿ ಮಳೆಗೆ ಇಡೀ ರಸ್ತೆ ಸಂಪೂರ್ಣ ಕೆಸರುಮಯವಾಗಿ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಹಾಗೂ ಬೊಮ್ಮನಹಳ್ಳಿ , HSR ಲೇಔಟ್, ಯಲಹಂಕ, ಹೊಸಕೆರೆಹಳ್ಳಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ರಾಜಕಾಲುವೆ ತಡೆಗೋಡೆ ಹೊಡೆದ ಪರಿಣಾಮ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಪ್ರತಿ ಬಾರಿ ಮಳೆಯಲ್ಲೂ ಸಾಲು ಸಾಲು ತೊಂದರೆಗಳಾಗುತ್ತಿದೆ ಎಂದರು ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ಕುಪಿತಗೊಂಡ ನಗರದ ನಿವಾಸಿಗಳು ಸರ್ಕಾರದ ವಿರುದ್ದ ಕಿಡಿಕಾರಿದರು.
ಅಷ್ಟೆ ಅಲ್ಲದೇ ಮಲ್ಲೇಶ್ವರಂ 18ನೇ ಕ್ರಾಸ್ನಲ್ಲಿರುವ ಬೃಹತ್ ಮರವೊಂದು ನೆಲಕ್ಕೆ ಉರುಳಿ ಬಿದ್ದು ಕಾಂಪೌಂಡ್ ಕುಸಿದಿದೆ. ಅಲ್ಲದೇ, ಶ್ರೀರಾಂಪುರ ಮೆಟ್ರೋ ಸ್ಟೇಷನ್ ಒಳಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ನಗರದಲ್ಲಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗೋದು ಕಾಮನ್ ಆಗಿದೆ. ಆದರೆ, ಸುಮಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದರಿಂದ ನಮ್ಮ ಗೋಳು ಕೇಳೋರಿಲ್ಲ ಎಂದು ಮಾರೇನಹಳ್ಳಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.