ಮಂಗಳೂರು : ಮಡಿಕೇರಿಯಲ್ಲಿ ಯಾರಿಗೆ ಬೇಕಾದರೂ ರೈಫಲ್ ಟ್ರೈನಿಂಗ್ ಕೊಡಬಹುದಾ? ಎಂದು ವಿಪಕ್ಷ ಉಪನಾಯಕ ಯುಟಿ ಖಾದರ್ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿ ಭಜರಂಗದಳದಿಂದ ಶಸ್ತ್ರಾಭ್ಯಾಸ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪುಸ್ತಕ ಪೆನ್ನು ನೀಡುವ ಕೈಗಳಿಗೆ ರೈಫಲ್ ನೀಡಿದ್ದಾರೆ. ಅಲ್ಲದೇ ಶಾಸಕರೇ ಮುಂದೆ ನಿಂತು ರೈಫಲ್ ಅಭ್ಯಾಸ ಮಾಡಿಸುತ್ತಿದ್ದಾರೆ ಎಂದರು.
ಅಲ್ಲದೇ ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಹಾಗೂ ಗೂಂಡಾಗಿರಿಯನ್ನು ಹೊರಗುತ್ತಿಗೆ ನೀಡಲಾಗಿದೆ. ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಜನರಿಗೆ ಉತ್ತರ ನೀಡಬೇಕು. ಎನ್ಸಿಸಿಯಲ್ಲೂ ರೈಫಲ್ ಅಭ್ಯಾಸ ಇದೆ. ಆದರೆ, ಅದು ಸರ್ಕಾರದ ಮಾನ್ಯತೆಯನ್ನು ಪಡೆದಿದೆ ಮತ್ತು ಅದರ ಉದ್ದೇಶ ದೇಶಪ್ರೇಮವಾಗಿದೆ ಎಂದು ತಿಳಿಸಿದರು.
ಇನ್ನು ಮಡಿಕೇರಿಯಲ್ಲಿ ಯಾರಿಗೆ ಯಾರು ಬೇಕಾದರೂ ರೈಫಲ್ ಟ್ರೈನಿಂಗ್ ಕೊಡಬಹುದಾ? ಈ ಟ್ರೈನಿಂಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಪರ್ಮೀಷನ್ ಇದ್ದೀಯಾ? ಸರ್ಕಾರ ಭವಿಷ್ಯದ ಒಳಿತನ್ನು ಗಮನಹರಿಸಿ ನಿರ್ಧಾರ ಕೈಗೊಳ್ಳಬೇಕು. ಸರ್ಕಾರ ಈ ಟ್ರೈನಿಂಗ್ಗೆ ಪರೋಕ್ಷವಾಗಿ ಬೆಂಬಲ ನೀಡಿದೆ ಎಂದು ವಿಪಕ್ಷ ಉಪನಾಯಕ ಯುಟಿ ಖಾದರ್ ಸರ್ಕಾರದ ವಿರುದ್ಧ ಕಿಡಿಕಾರಿದರು.