ಶಿವಮೊಗ್ಗ: ನಮ್ಮ ದೇಶದಲ್ಲಿ ಇಂದಿಗೂ ದೇಶದ್ರೋಹಿಗಳು ಇದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 350 ವರ್ಷಗಳ ಹಿಂದೆ ಕಾಶಿ ವಿಶ್ವನಾಥನ ದೇವಸ್ಥಾನವನ್ನು ಔರಂಗಜೇಬ್ ಧ್ವಂಸ ಮಾಡಿದ್ದ. ಅಹಲ್ಯಾಬಾಯಿ ಹೋಲ್ಕರ್ ವಿಶ್ವನಾಥನ ದೇವಸ್ಥಾನ ಕಟ್ಟಿಸಿದ್ದರು. ಹೀಗಾಗಿ ಎಲ್ಲರೂ ಪಕ್ಷಭೇಧ ಮರೆತು ಈ ವಿಷಯದಲ್ಲಿ ಒಂದಾಗಬೇಕು. ಅಲ್ಲಿದ್ದ ದೇವಸ್ಥಾನ ಹೊಡೆದು, ದೇವಸ್ಥಾನ ಸರ್ವೇ ಮಾಡಬೇಕು ಅಂದಾಗ ಅನೇಕ ಬಾರಿ ಅನೇಕರು ಪ್ರತಿಭಟನೆ ನಡೆಸಿದ್ದಾರೆ ಎಂದರು.
ಇನ್ನು ದೇಶದ್ರೋಹಿ ಓವೈಸಿ ಹಾಗು ಅವನ ಅಣ್ಣ ತಮ್ಮಂದಿರು ಔರಂಗಜೇಬನ ಸಮಾಧಿಗೆ ತೆರಳಿ ನಮಸ್ಕರಿಸುತ್ತಾರೆ. ನಮ್ಮ ದೇಶದಲ್ಲಿ ಇಂದಿಗೂ ಇಂತಹ ದೇಶದ್ರೋಹಿಗಳು ಇದ್ದಾರೆ. ಮುಸಲ್ಮಾನರಿಗೆ ಮೆಕ್ಕಾ ಪುಣ್ಯ ಕ್ಷೇತ್ರ, ಕ್ರಿಶ್ಚಿಯನ್ನರಿಗೆ ಜೆರುಸಲೇಂ ಪುಣ್ಯಕ್ಷೇತ್ರ. ಅದೇ ರೀತಿ ಹಿಂದುಗಳಿಗೆ ಕಾಶಿ ಅಯೋಧ್ಯೆ, ಮಥುರಾ ಪುಣ್ಯಕ್ಷೇತ್ರವಾಗಿದೆ ಎಂದು ತಿಳಿಸಿದರು.
ಅಲ್ಲದೇ ನಿನ್ನೆ ಕಾಶಿಯಲ್ಲಿ 12 ಅಡಿ ಎತ್ತರದ ಈಶ್ವರ ಲಿಂಗ ಹೊರಗೆ ಬಂದಿದೆ. 36 ಸಾವಿರ ದೇವಸ್ಥಾನವನ್ನು ಈ ದೇಶದಲ್ಲಿ ಹೊಡೆದು ಹಾಕಿ ಅಲ್ಲಿ ಮಸೀದಿ ಕಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಒಂದು ಮಸೀದಿ ಮೇಲೆ ಭಗವಧ್ವಜದ ಚಿತ್ರ ಹಾಕಿದ್ದಕ್ಕೆ ದಂಗೆ ಹೇಳುತ್ತಾರೆ. ಅಯೋಧ್ಯೆ ಕಳೆದುಕೊಂಡಿದ್ದೇವೆ, ಈಗ ಕಾಶಿ ಕಳೆದುಕೊಳ್ಳಲ್ಲ ಅಂತಾ ಒಬ್ಬ ಮೌಲ್ವಿ ಹೇಳ್ತಾನೆ. ಇವನು ಯಾವನು ಕಳೆದುಕೊಳ್ಳಲ್ಲ ಅಂತಾ ಹೇಳೋದಕ್ಕೆ..? ಅವು ನಮ್ಮ ದೇವಸ್ಥಾನಗಳು ಅವುಗಳನ್ನು ನಾವು ತೆಗೆದುಕೊಂಡೇ ತೆಗೆದುಕೊಳ್ಳುತ್ತೇವೆ ಎಂದು ಗುಡುಗಿದರು.
ಅಷ್ಟೇ ಅಲ್ಲದೇ ಕಾಶಿಯಲ್ಲಿ ನಂದಿ, ಶೃಂಗಾರ ಗೌರಿ, ಆಂಜನೇಯನ ವಿಗ್ರಹ ಪತ್ತೆಯಾಗಿದೆ. ಈಶ್ವರ ಲಿಂಗ ಇದ್ದ ಸ್ಥಳದ ಮೇಲೆ ನೀರನ್ನು ಇಟ್ಟು ಅವರು ಮಸೀದಿಯೊಳಗೆ ಕಾಲು ತೊಳೆದುಕೊಂಡು ಹೋಗ್ತಿದ್ರು ಅಂದ್ರೆ ಅವರಿಗೆ ಇನ್ನೆಷ್ಟು ಸೊಕ್ಕು ಇರಬೇಕು? ಮುಸಲ್ಮಾನರನ್ನು ತೃಪ್ತಿಪಡಿಸುವ ಮೂಲಕ ರಾಜಕೀಯ ಮಾಡಬೇಕು ಅಂತಾ ಅಂದುಕೊಂಡಿದರೆ, ಮೊದಲು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಹಿಂದು ಸಮಾಜಕ್ಕೆ ಅಪಮಾನ ಮಾಡಬೇಡ ಅಂತಾ ಹೇಳುವ ಧೈರ್ಯ ಯಾವ ಕಾಂಗ್ರೆಸ್ ನ ನಾಯಕರಿಗಾದರು ಇದೆಯಾ..? ಕೋರ್ಟ್ ತೀರ್ಪು ಬಂದ್ರು ಕೋರ್ಟ್ ತೀರ್ಪಿನ ವಿರುದ್ದ ಮಾತನಾಡ್ತಾರೆ ಅಂದ್ರೆ ಇವರಿಗೆ ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ಗೌರವ ಇದೆಯಾ..? ರಾಷ್ಟ್ರ ದ್ರೋಹಿಗಳಿಗೆ ಕೆಲವರು ಬೆಂಬಲ ಕೊಡುತ್ತಿರುವುದರಿಂದ ಇನ್ನು ಕೆಲವು ರಾಷ್ಟ್ರ ದ್ರೋಹಿಗಳು ಉಸಿರಾಡುತ್ತಿದ್ದಾರೆ. ಕೋಮು ಸೌಹಾರ್ದ ಹೆಸರಿನಲ್ಲಿ ಹಿಂದುಗಳಿಗೆ ಮಾತ್ರ ಬುದ್ದಿ ಹೇಳುವ ಪ್ರಯತ್ನ ಬೇಡ. ಔರಂಗಜೇಬನ ಸಂತತಿ ಆಗೋದು ಬೇಡ, ಅಹಲ್ಯಾಬಾಯಿ ಹೋಲ್ಕರ್ ಸಂತತಿ ಆಗಿ. ಶಾಂತಿಯಿಂದ ಇರುವುದು ಹಿಂದುಗಳ ದೌರ್ಬಲ್ಯವಲ್ಲ. ಮುಸಲ್ಮಾನರನ್ನು ನಾನು ದ್ವೇಷ ಮಾಡಲ್ಲ. ಆದರೆ, ಅವರು ಸಹ ಇತ್ತೀಚೆಗೆ ಪರಿವರ್ತನೆ ಆಗುತ್ತಿದ್ದಾರೆ. ಆದ್ದರಿಂದ ರಾಷ್ಟ್ರ ದ್ರೋಹ ಕೃತ್ಯಕ್ಕೆ ಕಾಂಗ್ರೆಸ್ಗೆ ಬೆಂಬಲ ಕೊಡಬೇಡಿ ಎಂದು ಆಕ್ರೋಶ ಹೊರಹಾಕಿದರು.