ಬೆಂಗಳೂರು: ದೇಶವನ್ನ ಸುರ್ಧಿಘಾವಧಿ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷ. ಆದ್ರೆ, ಯಾವಾಗ ಮೋದಿ ಸರ್ಕಾರ ಕೇಂದ್ರದಲ್ಲಿ ಬಂತೋ ಅವಾಗಿನಿಂದ ಕಾಂಗ್ರೆಸ್ ಕುಸಿತ ಆರಂಭವಾಗಿದೆ. ಒಂದೊಂದೇ ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನ ಕಳೆದುಕೊಳ್ತಿದೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲೂ ಹೀನಾಯ ಸೋಲು ಕಂಡಿತ್ತು. ಇದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿತ್ತು. ಇದನ್ನರಿತ ಹೈಕಮಾಂಡ್, ಮದ್ದು ಅರೆಯುವ ಕೆಲಸ ಮಾಡಿದೆ.
ಪಕ್ಷ ಬಲವರ್ಧನೆಗೆ ಮುಂದಾಗಿರೋ ಕಾಂಗ್ರೆಸ್ ಹೈಕಮಾಂಡ್, ಚಿಂತನ ಮಂಥನ ಮಾಡಿ ಹತ್ತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅದರ ಭಾಗವಾಗಿ ರಾಜ್ಯ ಕಾಂಗ್ರೆಸ್ನಲ್ಲಿರುವ ಬಣ ರಾಜಕೀಯ ಮತ್ತು ಶೀತಲ ಸಮರಕ್ಕೆ ಬ್ರೇಕ್ ಹಾಕಲು ದಿಟ್ಟ ಹೆಜ್ಜೆ ಇಟ್ಟಿದೆ. ಹೀಗಾಗಿ ಜೂನ್ ತಿಂಗಳ ಮೊದಲ ಅಥವಾ 2ನೇ ವಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಜೊತೆಗೆ ರಾಹುಲ್ ಗಾಂಧಿ ಸಭೆ ಮಾಡುವ ಮೂಲಕ ಇಬ್ಬರ ನಡುವೆ ಇರುವ ಭಿನ್ನಾಭಿಪ್ರಾಯ ದೂರ ಮಾಡುವ ಚಿಂತನೆಯಲ್ಲಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಹಠಕ್ಕೆ ಕೈ ಹೈಕಮಾಂಡ್ ಬಂದಿದೆ.
ಒಂದ್ಕಡೆ ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸ್ತಿದ್ರೆ. ಮತ್ತೊಂದೆಡೆ ಮೇಲ್ಮನೆ ಚುನಾವಣೆ ಎದುರಾಗಿದೆ. ಒಂದು ರಾಜ್ಯಸಭೆ ಮತ್ತು ಎರಡು ಪರಿಷತ್ ಸ್ಥಾನಗಳು ಕಾಂಗ್ರೆಸ್ ಗೆಲ್ಲಲಿದೆ. ಹೀಗಾಗಿ ಯಾರು ಅಭ್ಯರ್ಥಿ ಆಗಬೇಕು ಅಂತ ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ರಾಜ್ಯಸಭೆಗೆ ಐದಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಜೈರಾಮ್ ರಮೇಶ್ ಮತ್ತೆ ಆಯ್ಕೆಗೆ ಪ್ರಯತ್ನಿಸ್ತಿದ್ರೆ. ತುಮಕೂರು ಲೋಕಸಭಾ ಟಿಕೆಟ್ ವಂಚಿತರಾಗಿದ್ದ ಮುದ್ದಹನುಮೇಗೌಡ ಕೂಡ ಆಕಾಂಕ್ಷಿಯಾಗಿದ್ದಾರೆ. ಇವರಿಗೆ ಟಿಕೆಟ್ ನೀಡಬೇಕು ಅಂತ ಸಂಸದ ಡಿ.ಕೆ.ಸುರೇಶ್, ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಇನ್ನು, ಪರಿಷತ್ನ ಎರಡು ಸ್ಥಾನಕ್ಕೆ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಲಾಬಿ ನಡೆಸ್ತಿದ್ಧಾರೆ.
ಚಿಂತನ ಮಂಥನ ಬಳಿಕ ಹಲವು ಬದಲಾವಣೆಗೆ ಕಾಂಗ್ರೆಸ್ ಕೈ ಹಾಕಿದೆ. ಕುಟುಂಬದ ಒಬ್ಬ ಸದಸ್ಯರಿಗೆ ಟಿಕೆಟ್ ನೀಡುವ ಕುರಿತು ಕೂಡ ಗಂಭೀರ ಚಿಂತನೆ ನಡೆಸಿದೆ. ಅಲ್ಲದೆ 70 ವರ್ಷ ಮೇಲ್ಪಟ್ಟ ನಾಯಕರಿಗೆ ಟಿಕೆಟ್ ನೀಡದಿರಲು ಕೂಡ ಕೈ ಪಡೆ ಚರ್ಚೆ ನಡೆಸುತ್ತಿದೆ. ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿದೆ. ಹೀಗಾಗಿ ಆಂತರಿಕ ಕಲಹಕ್ಕೆ ಬ್ರೇಕ್ ಹಾಕಿ ಒಗ್ಗಟಿನ ಮುಖಾಂತರ ಮತ್ತೆ ಪ್ರಾಬಲ್ಯ ಸಾಧಿಸಿ ಅಧಿಕಾರಕ್ಕೆ ಏರಬೇಕು ಅಂತ ಪ್ರಯತ್ನಕ್ಕೆ ಕೈ ಹಾಕಿದೆ.