Friday, November 22, 2024

ಪರಿಷತ್ ಸ್ಥಾನಕ್ಕೆ ವಿಜಯೇಂದ್ರ, ಕಾಂಗ್ರೆಸ್ ಕನಸು ಭಗ್ನ..!

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ರಾಜ್ಯ ಕಾಂಗ್ರೆಸ್‌ ಪಾಲಿಗೆ ಮಹತ್ವ ಪಡೆದಿದೆ. ಯಾಕಂದ್ರೆ, ದೇಶದ ಕೆಲವೇ ರಾಜ್ಯದಲ್ಲಿ ಮಾತ್ರ ಕೈ ದರ್ಬಾರು ಜೋರಾಗಿದೆ. ಇನ್ನು, ದಕ್ಷಿಣದಲ್ಲಿ ಕರ್ನಾಟಕ ಪ್ರಬಲ ಅಖಾಡವಾಗಿದ್ದು, ಮುಂಬರುವ ಚುನಾವಣೆಗೆ ಮತ್ತಷ್ಟು ಭದ್ರ ಮಾಡುವ ತಯಾರಿಯಲ್ಲಿದೆ ಕಾಂಗ್ರೆಸ್‌ ಹೈಕಮಾಂಡ್‌. ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಪ್ರಬಲ ಸಮುದಾಯಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ದಲಿತ, ಹಿಂದುಳಿದ ಮತ್ತು ಮುಸ್ಲಿಂ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ರೆ, ಒಕ್ಕಲಿಗ ಮತ್ತು ಲಿಂಗಾಯತ ಮತಗಳ ಮೇಲೆ ಡಿಕೆಶಿ ಕಣ್ಣಿಟ್ಟಿದ್ದಾರೆ. ಹೀಗಾಗಿ, ಬಹುತೇಕ ಲಿಂಗಾಯತ ಸ್ವಾಮೀಜಿಗಳ ಜೊತೆಗೆ ಡಿಕೆಶಿ ನಿರಂತರ ಸಂಪರ್ಕದಲ್ಲಿದ್ದಾರೆ.

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಲಿಂಗಾಯತ ನಾಯಕತ್ವದ ಕೊರತೆಯಿದೆ. ವಿಜಯೇಂದ್ರ ಅವರನ್ನು ಬಿಜೆಪಿ ಸರಿಯಾಗಿ ಬಳಸಿಕೊಂಡಿಲ್ಲ. ಜೊತೆಗೆ, ಅವರಿಗೆ ಸ್ಥಾನಮಾನ ನೀಡಿಲ್ಲ ಅಂತ ಕಾಂಗ್ರೆಸ್ ಪ್ರಚಾರ ಮಾಡಿ ಚುನಾವಣೆಯಲ್ಲಿ ಲಿಂಗಾಯತರನ್ನು ಕಾಂಗ್ರೆಸ್ ಕಡೆಗೆ ಒಲಿಸಿಕೊಳ್ಳುವ ಪ್ಲಾನ್ ಹಾಕಿಕೊಂಡಿತ್ತು. ಆದ್ರೆ ಕಾಂಗ್ರೆಸ್‌ನ ಈ ಪ್ಲಾನ್ ಫ್ಲಾಪ್‌ ಆಗಿದೆ. ವಿಜಯೇಂದ್ರಗೆ ಬಿಜೆಪಿಯಿಂದ ಪರಿಷತ್‌ಗೆ ಆಯ್ಕೆ ಮಾಡಲಾಗುತ್ತಿದೆ. ಅಲ್ಲದೆ ಮಂತ್ರಿ ಕೂಡ ಮಾಡುವ ಯೋಚನೆಯಲ್ಲಿ ಕಮಲ ಪಾಳಯ ಇದೆ. ಹೀಗಾಗಿ, ಬೇರೆ ಬೇರೆ ರೀತಿಯಲ್ಲಿ ಲಿಂಗಾಯತ ಸಮುದಾಯವನ್ನು ಸೆಳೆದುಕೊಳ್ಳಲು ಕಾಂಗ್ರೆಸ್‌ ಯತ್ನಿಸಿದೆ.

ಇನ್ನೂ ದೇಶವ್ಯಾಪಿ ಕಾಂಗ್ರೆಸ್ ನೆಲಕಚ್ಚಿದೆ. ಪಂಚ ರಾಜ್ಯಗಳ ಚುನಾವಣೆ ಕೈ’ಗೆ ಬಾರಿ ಡ್ಯಾಮೇಜ್ ಮಾಡಿದೆ. ಹೀಗಾಗಿ ಮತ್ತೆ ದೇಶವ್ಯಾಪಿ ಹಸ್ತ ಅರಳಿಸಬೇಕಾದ ಸಮಯ ಬಂದಿದೆ. ಅದಕ್ಕಾಗಿ ಕೈ’ ನಾಯಕರು ಮೂರು ದಿನಗಳ ಕಾಲ ರಾಜಸ್ಥಾನದ ಉದಯಪುರದಲ್ಲಿ ಚಿಂತನ ಮಂಥನ ಮಾಡಿದ್ದಾರೆ. ಈ ಸಭೆಯಲ್ಲಿ ಭಾರತ್ ಜೊಡೋ ಯಾತ್ರೆ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದೆ. ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ಇದಕ್ಕೆ ಚಾಲನೆ ನೀಡಲಾಗುತ್ತಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ನಡೆಯಲಿದೆ. ಈ ಮೂಲಕ ಜನರ ಮನಸ್ಸು ತಲುಪಲು ಕಾಂಗ್ರೆಸ್ ನಿರ್ಧರಿಸಿದೆ. ಜಿಲ್ಲಾ ಮಟ್ಟದಲ್ಲಿ ಜನಜಾಗರಣ ಅಭಿಯಾನ, ದೇಶದ ಆರ್ಥಿಕತೆ ಬಗ್ಗೆ ಬೆಳಕು ಚೆಲ್ಲುವುದು, ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಜನಜಾಗೃತಿ, ಪಕ್ಷದ ಮೇಲೆ ನಿಗಾ ಇಡಲು ಟಾಸ್ಕ್ ಫೋರ್ಸ್‌ ರಚನೆ ಮಾಡಿ ಪಕ್ಷದ ಕಾರ್ಯ ವೈಖರಿ ಸುಧಾರಣೆ ಮತ್ತು ಆಡಳಿತ ಪಕ್ಷ ಬಿಜೆಪಿ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಪ್ಲ್ಯಾನ್‌ ಕಾಂಗ್ರೆಸ್ ನಾಯಕರು ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಇನ್ನಷ್ಟು ಆಕ್ಟಿವ್ ಆಗಲು ನಿರ್ಧರಿಸಿದೆ. ಆದ್ರೆ, ಬಿಜೆಪಿ ವೈಫಲ್ಯಗಳನ್ನುತಾರ್ಕಿಕ ಅಂತ್ಯದವರೆಗೆ ತೆಗೆದುಕೊಂಡು ಹೋಗಲು ಕಾಂಗ್ರೆಸ್‌ ಪಡೆಗೆ ಸಾಧ್ಯವಾಗ್ತಿಲ್ಲ.

RELATED ARTICLES

Related Articles

TRENDING ARTICLES