ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕದಿರನ್ನಾಗಾರಿಪಲ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಿನ್ನೆ ರಾತ್ರಿಯಿಂದ ಪದೇ ಪದೇ ಭೂಮಿ ಕಂಪನವಾಗ್ತಿರೋದರಿಂದ ಜನ ಭಯಭೀತರಾಗಿ ಬೀದಿಗಳಲ್ಲಿ ಆತಂಕದಿಂದ ಕಾಲ ಕಳೆಯುವಂತಾಗಿದೆ.
ಭೂಮಿಯ ಅಂತರಾಳದಿಂದ ಬಂದ ಅ ಸದ್ದು ಆ ಜನರನ್ನ ಇಡೀ ರಾತ್ರಿ ನಿದ್ದೆಯಿಲ್ಲದಂತೆ ಮಾಡಿ ಜಾಗರಣೆ ಮಾಡುವಂತೆ ಮಾಡಿತ್ತು. ಈಗಲೂ ಸಹ ಒಂದಲ್ಲ ಎರಡಲ್ಲ ಹತ್ತಾರು ಗ್ರಾಮಗಳಲ್ಲಿ ಪದೇ ಪದೇ ಅದೇ ರೀತಿಯ ಭಾರೀ ಸ್ಫೋಟದ ಸದ್ದು ಕೇಳಿಬರ್ತಿದ್ದು ಜನ ಆತಂಕದಿಂದ ಕಾಲ ಕಳೆಯುವಂತಾಗಿದೆ.
ಇದ್ದಕ್ಕಿದ್ದಂತೆ ದುಪ್ಪ್ ಅಂತ ಬರೋ ಆ ಸದ್ದಿಗೆ ಭೂಮಿಯೇ ಗಡ ಗಡ ನಡುಗುತ್ತಿದೆ. ಇದ್ರಿಂದ ಜನರಿಗೆ ಭೂಕಂಪನದ ಅನುಭವ ಆಗುತ್ತಿದೆ. ನಿನ್ನೆ ರಾತ್ರಿ ೮ ಗಂಟೆಯಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸದ್ದು ರಾತ್ರಿ ೯.೩೦ ಹಾಗೂ ೯.೪೫ ರಲ್ಲಿ ಬಹಳಷ್ಟು ಜೋರಾಗಿ ಕೇಳಿಬಂದಿದೆ. ಇದ್ರಿಂದ ಭೂಮಿಯೇ ಅಲುಗಾಡಿದ ಅನುಭವ ಆಗಿ ಮನೆಯಲ್ಲಿದ್ದವರೆಲ್ಲಾ ಕೀರಾಚಾಡುತ್ತಾ ಹೊರಗೆ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ ಸಾಮಾನುಗಳಲ್ಲೆವೂ ಅಲುಗಾಡತೊಡಗಿವೆ. ಮಕ್ಕಳು ಭಯಭೀತರಾಗಿ ಚೀರಾಡಿ ಕಣ್ಣೀರು ಹಾಕಿದ್ದಾರೆ. ದಿಕ್ಕು ತೋಚದ ಜನ ಇಡೀ ರಾತ್ರಿ ಮನೆಯ ಹೊರಭಾಗದಲ್ಲೇ ಕಾಲ ಕಳೆದು ಜಾಗರಣೆ ಮಾಡುವಂತಾಗಿದೆ.