ಬೆಂಗಳೂರು: ನಮ್ಮ ಕಸದ ಲಾರಿಗಳಿಂದಾದ ಅಪಘಾತದಲ್ಲಿ ನಮ್ಮ ಚಾಲಕರದ್ದು ಯಾವುದೇ ತಪ್ಪಿಲ್ಲ ಎಂದು, ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲ ಸುಬ್ರಮಣ್ಯ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಸದ ಲಾರಿಗಳಿಂದಾದ ಅಪಘಾತದಲ್ಲಿ ನಮ್ಮ ಚಾಲಕರದ್ದು ಯಾವುದೇ ತಪ್ಪಿಲ್ಲ. ತಪ್ಪಿದ್ದರೆ ಪೊಲೀಸ್ ಅಧಿಕಾರಿಗಳು ಹೇಳಲಿ, ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಸುಖಾಸುಮ್ಮನೆ ಬಿಬಿಎಂಪಿ ಕಸದ ಗುತ್ತಿಗೆದಾರರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಲಾರಿ ಸೀಝ್ ಮಾಡಿದರೆ ಬಿಡಿಸಿಕೊಳ್ಳಲು ಪೊಲೀಸರೇ ಲಂಚ ಪಡೆಯುತ್ತಾರೆ. ಒಂದು ಲಕ್ಷ ರೂಪಾಯಿ ಕೊಡದೆ ನಮ್ಮ ಲಾರಿಗಳನ್ನು ರಿಲೀಸ್ ಮಾಡುವುದಿಲ್ಲ ಎಂದರು.
ಇನ್ನು, ಮೊನ್ನೆ ಥಣಿಸಂಧ್ರದ ಘಟನೆಯಲ್ಲೂ ನಮ್ಮ ಚಾಲಕನ ಯಾವುದೇ ತಪ್ಪಿರಲಿಲ್ಲ. ಆ ಡೆಲಿವರಿ ಬಾಯ್ ಡ್ರಿಂಕ್ಸ್ ಮಾಡಿರುವುದು ಪೊಲೀಸರಿಗೂ ಗೊತ್ತಾಗಿತ್ತು. ಆದರೆ ಇನ್ಶೂರನ್ಸ್ ಸಿಕ್ಕರೆ ಸಿಗ್ಲಿ ಅಂತ ಪೊಲೀಸರೇ ಆ ವಿಚಾರ ಕೈ ಬಿಡುವಂತೆ ಹೇಳಿದ್ದರು. ನಾವೂ ಮಾನವೀಯತೆ ದೃಷ್ಟಿಯಿಂದ ಹೋಗಲಿ ಬಿಡಿ ಎಂದಿದ್ವಿ ಆದರೆ ಮರು ಕ್ಷಣವೇ ನಮ್ಮ ಚಾಲಕನಿಗೆ ಹೆವೀ ವೈಕಲ್ಸ್ ಬ್ಯಾಡ್ಜ್ ಇಲ್ಲಾ ಅಂತ ಪೊಲೀಸರು ಹೇಳಿದರು.
ಅದುವಲ್ಲದೇ, ನಮ್ಮ ಚಾಲಕನ ಬಳಿ ಹೆವೀ ವೈಕಲ್ ಬ್ಯಾಡ್ಜ್ ಇದೆ, ಅದನ್ನು ನಾವು ಸಾಬೀತು ಮಾಡುತ್ತೇವೆ. ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಕೊಡುವ ಕಿರುಕುಳಕ್ಕೆ ನಮ್ಮ ಸಿಬ್ಬಂದಿಗಳು ಕೆಲಸ ಬಿಟ್ಟು ಹೋಗ್ತಿದ್ದಾರೆ. ನಾವು ಟ್ರಾಫಿಕ್ ಪೊಲೀಸ್ ಕಮೀಷನರ್ರನ್ನು ಭೇಟಿಯಾಗಿ ಇದಕ್ಕೊಂದು ಅಂತ್ಯ ಕಾಣಿಸಲಿದ್ದೇವೆ ಎಂದರು.