Monday, December 23, 2024

ಹಿಂದೂ ಕಾರ್ಯಕರ್ತರಿಗೆ ಬಂದೂಕು ತರಬೇತಿ : SDPI ಕೆಂಡಾಮಂಡಲ

ಮಡಿಕೇರಿ :  ಕೊಡಗಿನಲ್ಲಿ ಶೌರ್ಯ ಪ್ರಶಿಕ್ಷಣ ವರ್ಗ ಹೆಸರಿನಲ್ಲಿ ಹಿಂದೂ ಕಾರ್ಯಕರ್ತರಿಗೆ ತ್ರಿಶೂಲ ನೀಡಿ, ಬಂದೂಕು ತರಬೇತಿ ಕೊಡುತ್ತಿರುವ ಘಟನೆ ಪೊನ್ನಂಪೇಟೆ ಸಾಯಿ ಶಂಕರ ಶಾಲೆಯಲ್ಲಿ  ನಡೆದಿದೆ.

ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ 119 ಶಿಕ್ಷಣಾರ್ಥಿಗಳು ಸೇರಿ 140 ಮಂದಿ ಇದ್ದರು. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬಂದಿದ್ದರು.

ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು, ಸಂಸ್ಥೆಯ ಸಭಾಂಗಣ ಮತ್ತು ಆವರಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವುದು, ತ್ರಿಶೂಲಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

‘ಶಸ್ತ್ರಾಸ್ತ್ರ ತರಬೇತಿಯ ಮಾಹಿತಿ ಇಲ್ಲ. ಆಯೋಜಕರೇ ಊಟ, ಮತ್ತಿತರ ವ್ಯವಸ್ಥೆ ಮಾಡಿಕೊಂಡಿದ್ದರು. ಇದರಲ್ಲಿ ಸಂಸ್ಥೆಯ ಪಾತ್ರವಿಲ್ಲ. ರಜೆಯಿದ್ದ ಕಾರಣ ಶಿಕ್ಷಕರೂ ಇರಲಿಲ್ಲ. ಈ ಹಿಂದೆ ರಾಷ್ಟ್ರಮಟ್ಟದ ತರಬೇತಿಯೂ ನಡೆದಿತ್ತು. ಹೊರ ರಾಜ್ಯದಿಂದ ಶಿಕ್ಷಣಾರ್ಥಿಗಳುಬಂದಿದ್ದರು’ ಎಂದು ಸಂಸ್ಥೆಯ ಅಧ್ಯಕ್ಷ ಜರು ಗಣಪತಿ ಪ್ರತಿಕ್ರಿಯಿಸಿದರು.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ  ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಅವರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರೇ, ಶಾಲೆಗಳಲ್ಲಿ ಹಿಜಾಬ್‌ ನಿರ್ಬಂಧ ವಿಧಿಸಿರುವ ನಿಮ್ಮ ಸರ್ಕಾರ, ಬಜರಂಗದಳಕ್ಕೆ ಒಂದು ವಾರ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಲು ಅನುಮತಿ ಕೊಟ್ಟ ಪೊನ್ನಂಪೇಟೆಯ ಸಾಯಿ ಶಂಕರ ಶಿಕ್ಷಣ ಸಂಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಂಡಿದೆ’ ಎಂದು ಪ್ರಶ್ನಿಸಿದ್ಧಾರೆ ಸುಮಾರು ಹತ್ತು ದಿನ ಶಿಬಿರ ನಡೆದಿದೆ.

ಈ ಅವಧಿಯಲ್ಲಿ ಒಮ್ಮೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ ಸಹ ಪಾಲ್ಗೊಂಡಿದ್ದರು ಎಂದು ಮೂಲಗಳು ಖಚಿತ ಪಡಿಸಿವೆ.

RELATED ARTICLES

Related Articles

TRENDING ARTICLES