ಶಿವಮೊಗ್ಗ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ಚಾಲಕನಿಗೆ ಒಮ್ಮೆಲೆ ಮೂರ್ಚೆ ರೋಗ ಬಂದ ಹಿನ್ನೆಲೆಯಲ್ಲಿ, ಟೆಂಪೋ ಟ್ರಾವೆಲರ್ ಅಪಘಾತಕ್ಕೀಡಾಗಿ 10 ಜನ ಪ್ರವಾಸಿಗರು ಗಾಯಗೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸಾಗರ ತಾಲೂಕಿನ ಸಿಗಂದೂರು ದೇವಾಲಯದ ಸಮೀಪ, ಕಳಸವಳ್ಳಿ ಗ್ರಾಮದಲ್ಲಿ ಟೆಂಪೋ ಟ್ರಾವೆಲರ್ ವಾಹನ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಇದರಿಂದಾಗ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಟಿ.ಟಿ. ವಾಹನದಲ್ಲಿದ್ದ 10 ಜನ ಪ್ರವಾಸಿಗರಲ್ಲಿ ನಾಲ್ವರಿಗೆ ಪೆಟ್ಟಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಬಾಬು, ಸುಚಿತ್ರ, ಡಿಂಪಾ, ಸಂಚಿತ, ಗುತ್ಯಮ್ಮ ಎಂದು ಗುರುತಿಸಲಾಗಿದೆ.
ಅದರಂತೆ, ಗಾಯಾಳುಗಳನ್ನು ಸಿಗಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇವರೆಲ್ಲರೂ ಬೆಂಗಳೂರು ಸಮೀಪದ ಬಿಡದಿ ಮೂಲದವರು ಎನ್ನಲಾಗಿದ್ದು, ಸಿಗಂದೂರಿಗೆ ದೇವಿ ವರ್ಶನಕ್ಕೆ ಆಗಮಿಸಿದ್ದರು. ವಾಹನ ಚಾಲನೆ ಮಾಡುತ್ತಿರುವ ವೇಳೆಯೇ, ಟಿಟಿ ಚಾಲಕ ನವೀನ್ ಗೆ ಫಿಡ್ಸ್ ಬಂದಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ.