ತ್ರಿಪುರ: ಚುನಾವಣೆಗೆ ಕೇವಲ ಒಂದೇ ವರ್ಷ ಬಾಕಿ ಇದೆ. ಈ ಮೊದ್ಲೇ ತ್ರಿಪುರಾ ಸಿಎಂ ಬಿಪ್ಲಬ್ ದೇವ್ ರಿಸೈನ್ ಮಾಡಿದ್ದಾರೆ. 2018 ರ ತ್ರಿಪುರಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ದೇವ್ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಿದ್ರು. ಸದ್ಯ ಗವರ್ನರ್ ಅವರಿಗೆ ಬಿಪ್ಲವ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಒಂದು ದಿನದ ಬಳಿಕ ಬಿಪ್ಲವ್ ಕುಮಾರ್ ದೇವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಶೇಷ ಅಂದ್ರೆ, ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿ ವರಿಷ್ಠರ ನಿರ್ಧಾರದಂತೆ ನಡೆದಿದೆ ಎನ್ನಲಾಗ್ತಿದೆ.
ಚುನಾವಣೆಗೂ ಮುನ್ನವೇ ರಾಜೀನಾಮೆ ನೀಡಿರೋದು ಇದೇ ಮೊದಲೇನು ಅಲ್ಲ. 2021ರಲ್ಲಿ ಬಿಜೆಪಿ ಆಡಳಿತವಿರುವ ಉತ್ತರಾಖಂಡ್, ಗುಜರಾತ್ ಹಾಗು ಕರ್ನಾಟಕ ಕೂಡ ಇಂತಹ ಬೆಳವಣಿಗಳಿಗೆ ಸಾಕ್ಷಿಯಾಗಿವೆ. ಹೌದು, ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ 2019ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಆದ್ರೆ, ಕೇವಲ ಎರಡು ವರ್ಷ ಅಧಿಕಾರ ಮಾಡಿದ್ದ ಬಿಎಸ್‌ವೈ ರಿಸೈನ್ ಪಡೆದಿತ್ತು ಹೈಕಮಾಂಡ್.. ಇದೀಗ, ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುಂಚೆಯೇ ಬಸವರಾಜ ಬೊಮ್ಮಾಯಿ ಸಿಎಂ ಪಟ್ಟ ತ್ಯಾಗ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಕಳೆದ ವರ್ಷ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಪಕ್ಷವು ಅವರಿಗೆ ನಿಯೋಜಿಸಲಾದ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದರು. ಅವರ ನಂತರ ಭೂಪೇಂದ್ರ ಪಟೇಲ್ ಅಧಿಕಾರ ವಹಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವು 1995 ರಿಂದ ಬಿಜೆಪಿ ಕೋಟೆಯಾಗಿರೋದು ಗೊತ್ತೇ ಇದೆ.
ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಯಶಸ್ವಿಯಾಗಿ ಹೊರಹಾಕಿತು. ಆದರೆ ಚುನಾವಣೆಗೆ ಒಂದು ವರ್ಷ ಮೊದಲು ಕೇಸರಿ ಪಕ್ಷವು ಮೂರು ಬಾರಿ ಮುಖ್ಯಮಂತ್ರಿಗಳನ್ನು ಬದಲಾಯಿಸಿತು. ನಾಲ್ಕು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ ತ್ರಿವೇಂದ್ರ ಸಿಂಗ್ ರಾವತ್ ಕಳೆದ ವರ್ಷ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಅವರ ನಂತರ ತಿರತ್ ಸಿಂಗ್ ರಾವತ್ ಅವರು ನಾಲ್ಕು ತಿಂಗಳಲ್ಲಿ ರಾಜೀನಾಮೆ ನೀಡಿ, ಪುಷ್ಕರ್ ಸಿಂಗ್ ಧಾಮಿಗೆ ದಾರಿ ಮಾಡಿಕೊಟ್ಟರು.