ಬೆಳಗಾವಿ : ಇದು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಇತ್ತೀಚೆಗಷ್ಟೇ ಕಬ್ಬು ಬೆಳೆಗಾರರಿಗೆ ಕೊಟ್ಟ ಭರವಸೆ ಇದು. ಸಕ್ಕರೆ ಕಾರ್ಖಾನೆ ಮಾಲೀಕರು ಯಾರೇ ಇರಲಿ ಕೂಡಲೇ ರೈತರ ಬಾಕಿ ಹಣ ಪಾವತಿಸಬೇಕು. ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ ಅಂತಾ ಸಚಿವರು ಸಭೆಯ ಬಳಿಕ ರೈತರಿಗೆ ಈ ಭರವಸೆ ಕೊಟ್ಟಿದ್ದರು. ಆದರೆ, ದುರಂತ ಎಂಬಂತೆ ಇದಾದ ಮೇಲೂ ಕಬ್ಬು ಬೆಳೆಗಾರರು ಕಚೇರಿಗೆ ಅಲೆಯುವುದು ತಪ್ಪಿಲ್ಲ. ಇದರಿಂದ ಕೆರಳಿದ ರೈತರು ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿಗೆ ಬಂದಿದ್ದ ಸಚಿವರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ವಿಷಯ ತಿಳಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತರಾತುರಿಯಲ್ಲಿ ರೈತರಿಗೆ ಸಿಗದೆ ಹೊರಟು ಹೋದರು. ಇದು ನೊಂದ ರೈತರನ್ನು ಮತ್ತಷ್ಟು ಕೆರಳಿಸಿತು. ಕೂಡಲೇ ಆಯುಕ್ತರ ಕಚೇರಿಯ ಬಾಗಿಲು ಬಂದ್ ಮಾಡಿ ಅಲ್ಲೇ ಧರಣಿ ಕುಳಿತರು. ಸರ್ಕಾರದ ಹಾಗೂ ಸಚಿವರ ವಿರುದ್ದ ಧಿಕ್ಕಾರ ಕೂಗಿದರು. ರೈತರ ಮನವೊಲಿಕೆ ಮುಂದಾದ ಆಯುಕ್ತರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
ಇನ್ನೂ ಒಂದು ಕಡೆ ರೈತರು ಕಬ್ಬಿನ ಬಾಕಿ ಬಿಲ್‌ಗಾಗಿ ಬೀದಿಗಿಳಿದು ಹೋರಾಟ ಮಾಡ್ತಿದ್ರೇ ಇತ್ತ ಸಚಿವರು, ಶಾಸಕರ ಒಡೆತನದ ಸಕ್ಕರೆ ಕಾರ್ಖಾನೆಗಳೇ ರೈತರಿಗೆ ಹಣ ನೀಡದೆ ಸತಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಹದಿನೈದು ಸಕ್ಕರೆ ಕಾರ್ಖಾನೆಯಿಂದ 2021-22ರ ಸುಮಾರು 90ಕೋಟಿ ಹಣ ಬಾಕಿ ಬಿಲ್ ಬರಬೇಕಿದೆ. ಸಕ್ಕರೆ ಆಯುಕ್ತರೆ ಈ ಮಾಹಿತಿಯನ್ನ ನೀಡಿದ್ದು ಇಡೀ ರಾಜ್ಯಾದ್ಯಂತ ರೈತರಿಗೆ 2ಸಾವಿರ ಕೋಟಿಗೂ ಅಧಿಕ ಹಣ ರೈತರಿಗೆ ಕಬ್ಬಿನ ಬಾಕಿ ಬಿಲ್ ಬರಬೇಕಿದೆ. ಆದರೆ, ಸಚಿವರು ಮಾತ್ರ ಸರ್ಕಾರಕ್ಕೆ ರೈತರೇ ಮುಖ್ಯ ಅಂತಾ ಪೊಳ್ಳು ಭರವಸೆ ಕೊಟ್ಟಿದ್ದರು.
ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಘಟಾನುಘಟಿ ನಾಯಕರುಗಳದ್ದೇ ಕಾರ್ಖಾನೆಗಳಿದ್ದು ದೊಡ್ಡ ದೊಡ್ಡ ಭಾಷಣ ಮಾಡುವವರು ರೈತರಿಗೆ ಹಣ ಕೊಡದೇ ಸತಾಯಿಸುತ್ತಿರುವುದು ವಿಪರ್ಯಾಸ.