ಬೆಂಗಳೂರು : ಏ.16ರಿಂದ ಆರಂಭವಾಗಿರುವ ಜನತಾ ಜಲಧಾರೆಯು ರಾಜ್ಯಾದ್ಯಂತ ಹದಿನೈದು ವಾಹನಗಳಲ್ಲಿ ಸಂಚರಿಸಿರುವ ಇಂದು ಜೆಡಿಎಸ್‌ನ ಜನತಾ ಜಲಧಾರೆಯ ಸಮಾರೋಪ ಸಮಾರಂಭವಾಗಿದ್ದು, ನೆಲಮಂಗಲದ ಬಾವಿಕೆರೆ ಬಳಿ ಜೆಡಿಎಸ್ ಬೃಹತ್ ಸಮಾವೇಶಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಜೆಡಿಎಸ್ ಮಹತ್ವಾಕಾಂಕ್ಷೆಯ ‘ಜನತಾ ಜಲ ಧಾರೆ’ ಸಮಾರೋಪ ಸಮಾರಂಭ ನಡೆಯಲಿದ್ದು, 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು. ನೀರಾವರಿ ಯೋಜನೆಗಳ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ನದಿಗಳ ನೀರನ್ನು ಸಂಗ್ರಹಿಸಿ ಆರಂಭ ಮಾಡಿದ ಕಾರ್ಯಕ್ರಮ ಇದಾಗಿದ್ದು, 180 ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಇಂದು ಮಧ್ಯಾಹ್ನ 3 ಗಂಟೆಗೆ ಸುಮಾರು 65 ಎಕರೆ ಜಾಗದಲ್ಲಿ ಸುಮಾರು ಸಾವಿರ ಅಡಿಯ ಬೃಹತ್ ವೇದಿಕೆ ನಿರ್ಮಾಣದಲ್ಲಿ ಸಮಾವೇಶವು ಆರಂಭವಾಗಲಿದೆ. ಈ ಕಾಯರ್ಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಹಾಗೂ ಹಾಲಿ, ಮಾಜಿ ಶಾಸಕರು, ಪದಾಧಿಕಾರಿಗಳು ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ.
ಅದುವಲ್ಲದೇ ಸಮಾವೇಶದ ಕೇಂದ್ರ ಬಿಂದುವಾಗಿ ಗಂಗಾಪೂಜೆ, ಗಂಗಾ ಆರತಿ ಮಾಡಲಿದ್ದು, ಇದಕ್ಕಾಗಿ ವಾರಣಾಸಿಯ 20 ಮಹಾ ಪಂಡಿತರಿಗೆ ಆಹ್ವಾನ ನೀಡಲಾಗಿದೆ. ಸಮಾವೇಶದಲ್ಲಿ ಸುಮಾರು ನಾಲ್ಕೈದು ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದ್ದು, ಎಲ್ಲರಿಗೂ ಇಡೀ ದಿನ ದಾಸೋಹ ವ್ಯವಸ್ಥೆ ಮಾಡಲಾಗಿದೆ.