ಕೋಲಾರ : ರಾಜ್ಯದಲ್ಲಿ ವರುಣನಬ್ಬರ ಮುಂದುವರಿದಿದೆ. ವಿವಿಧೆಡೆ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ.ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ನೂರಾರು ಎಕರೆಯಲ್ಲಿದ್ದ ಮಾವಿನ ಕಾಯಿಗಳು ನೆಲಕ್ಕುದುರಿವೆ. ಕೆಜಿಎಫ್ ತಾಲೂಕಿನ ವೆಂಕಟಾಪುರದ ಅಶೋಕ್ ಕೃಷ್ಣಪ್ಪ ಅವ್ರ 130 ಎಕರೆ ಮಾವಿನ ತೋಟದಲ್ಲಿ ಶೇಕಡ 75ರಷ್ಟು ಮಾವಿನ ಕಾಯಿಗಳು ಕೆಳಗೆ ಬಿದ್ದಿವೆ. ಮಾವಿನ ತವರು ಶ್ರೀನಿವಾಸಪುರದಲ್ಲಿ ಸರಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಅಲ್ಲೂ ಇದೇ ಪರಿಸ್ಥಿತಿ ಇದೆ.ಕೆಜಿಎಫ್‌ನ ದೇವರಹಳ್ಳಿಯ ರೈತ ಲೋಕನಾಥ್ 40 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ ಪಾಲಿ ಹೌಸ್ ಹರಿದು ಹೋಗಿದ್ದರೆ, 15 ಲಕ್ಷ ಖರ್ಚು ಮಾಡಿ ಹಾಕಲಾಗಿದ್ದ ನೆಟ್‍ಹೌಸ್ ಸಂಪೂರ್ಣ ನೆಲಕ್ಕುರುಳಿದೆ. ರೈತರ ಸರ್ಕಾರ ಸ್ಪಂದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿದ ಗುಡುಗು ಸಹಿತ ಮಳೆಗೆ ಬೆಣ್ಣೆನಗರಿ ಅಕ್ಷರಶಃ ನಲುಗಿದೆ. ನೂರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ದಾವಣಗೆರೆ, ಜಗಳೂರು, ಚನ್ನಗಿರಿ, ಹರಪನಹಳ್ಳಿ ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಭಾರಿ ಪ್ರಮಾಣದ ಭತ್ತ ನೆಲಕಚ್ಚಿದೆ. 500ಕ್ಕೂ ಹೆಚ್ಚು ಅಡಿಕೆ ಗಿಡಗಳು ನೆಲಕ್ಕುರುಳಿವೆ.. ಮೆಕ್ಕೆಜೋಳ, ತೆಂಗಿನ ಮರಗಳೂ ನಾಶವಾಗಿವೆ. ದಾವಣಗೆರೆ ತಾಲೂಕಿನ ದೊಡ್ಡ ಮಾಗಡಿಯೊಂದರಲ್ಲೇ 300 ಕ್ಕೂ ಹೆಚ್ಚು ಅಡಿಕೆ ಗಿಡಗಳು ನೆಲಕ್ಕುರುಳಿದ್ದು, ಸ್ಥಳಕ್ಕೆ ಶಾಸಕ ಪ್ರೊ.ಲಿಂಗಣ್ಣ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲೂ ವರುಣ ಭಾರಿ ಅವಾಂತರ ಸೃಷ್ಟಿಸಿದ್ದಾನೆ.ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಬಾಳೆ, ತೋಟದ ಮನೆ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.ಮಹಾಲಿಂಗ ಹೊಸೂರ ಎಂಬುವವರಿಗೆ ಸೇರಿದ ಬಾಳೆ, ಪರಪ್ಪ ಹೊಸೂರ ಎಂಬುವವರ ಎಲೆ ಬಳ್ಳಿ ತೋಟ ನೆಲಸಮವಾಗಿದೆ. ಇನ್ನು ತೋಟದ ಮನೆಯ ಶೀಟ್‌ಗಳು ಕೂಡ ಗಾಳಿಗೆ ಹಾರಿ ಹೋಗಿದ್ದು, ಇಡೀ ಕುಟುಂಬ ರಾತ್ರಿಯಿಡೀ ಮಳೆಯಲ್ಲೇ ಬಾಳೆ ಗಿಡಿದ ಕೆಳಗೆ ಆಸರೆ ಪಡೆದುಕೊಳ್ಳುವಂತಾಗಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆಯಬ್ಬರಕ್ಕೆ ಜನ ತತ್ತರಿಸಿದ್ದು, ಸಂಕಷ್ಟಕ್ಕೀಡಾಗಿರುವ ರೈತರಿಗೆ ಸರ್ಕಾರ ಸ್ಪಂದಿಸಬೇಕಿದೆ.