ಮೈಸೂರು : ನಾವು ಕಾಡಿನ ಮಕ್ಕಳು ಕಾಡಿನಲ್ಲಿ ಹುಟ್ಟಿ ಕಾಡಿನಲ್ಲಿಯೇ ಸಾಯುತ್ತೇವೆ ಎಂದಿದ್ದ ಆದಿವಾಸಿಗಳಿಗೆ ಸರ್ಕಾರ ಕೊಟ್ಟ ಮಾತು ತಪ್ಪಿದ್ಯಾ..? ಇಂಥಾದ್ದೊಂದು ಪ್ರಶ್ನೆಗೆ ಪುಷ್ಠಿ ಬಂದಿದ್ದು, ಆದಿವಾಸಿಗಳು ಸರ್ಕಾರದ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.
ಆದಿವಾಸಿ ಮುಗ್ದ ಕಾಡಿನ ಮಕ್ಕಳನ್ನು ಒಕ್ಕಲೆಬ್ಬಸಿ ಈಗ ಅಲ್ಲಿಯೂ ಇಲ್ಲ , ಕಾಡಿನಲ್ಲಿ ಮೂಲ ನೆಲೆಯೂ ಇಲ್ಲ ಎಂಬಂತೆ ಸರ್ಕಾರ ದ್ರೋಹ ಮಾಡಿದೆ.ಅರಣ್ಯದಲ್ಲಿ ಬದುಕು ಕಟ್ಟಿಕೊಂಡವರಿಗೆ ನಾಡಿನಾಸೆ ತೋರಿಸಿ ಸರ್ಕಾರ ಬೀದಿಗೆ ತಳ್ಳಿಬಿಟ್ಟಿದೆ. ಸರಿಯಾದ ರೀತಿ ಭೂಮಿಯನ್ನು ಹಂಚಿಕೆ ಮಾಡಿಕೊಡದೆ, ಕೃಷಿಗೆ ಭೂಮಿ ನೀಡದೆ ವಂಚಿಸಿದೆ ಎಂದು ಆದಿವಾಸಿಗಳು ಬೀದಿಗಿಳಿದಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರ ತೊರೆದು ಪೊನ್ನಂಪೇಟೆಯ ಆಡುಗುಂಡಿಗೆ ಬಂದು ಆದಿವಾಸಿಗಳು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ವಿರಾಜಪೇಟೆ ತಾಲೂಕಿನ ಆಡುಗುಂಡಿ ಹಾಡಿ, ಜಂಗಲ್ ಹಾಡಿಗಳಿಂದ 2018ರಲ್ಲಿ ಆದಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಹೆಚ್ ಡಿ ಕೋಟೆಯ ಮಾಸ್ತಿಗುಡಿ, ಹುಣಸೂರು ತಾಲ್ಲೂಕಿನ ನಾಗಪುರ ಹಾಡಿಗಳ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಹೀಗೆ ಸ್ಥಳಾಂತರ ಮಾಡುವಾಗ ಪ್ರತೀ ಕುಟುಂಬಕ್ಕೆ ಮೂರು ಎಕರೆ ಭೂಮಿ ಕೊಡುವ ಭರವಸೆ ನೀಡಲಾಗಿತ್ತು. ಆದರೆ,ಹಕ್ಕುಪತ್ರ ಮಾತ್ರ ನೀಡಲಾಗಿದ್ದು, ಅರಣ್ಯ ಭೂಮಿಯಂತಹ ಜಾಗ ತೋರಿಸಿ ಬೀದಿಗೆ ತಳ್ಳಿದ್ದಾರೆ ಅಂತಾ ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿ ಮೂಲಸೌಲಭ್ಯ ನೀಡದ ಹಿನ್ನೆಲೆ ಕೊಡಗಿನ ಹಾಡಿಗಳಿಗೆ 177 ಕುಟುಂಬಗಳು ವಾಪಸ್ ಆಗಿವೆ. ಆದ್ರೆ, ಅವರು ಮರಳಿ ಅರಣ್ಯ ಪ್ರವೇಶಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಡೆದಿದೆ. ರಸ್ತೆಯಲ್ಲಿಯೇ ಟೆಂಟ್‌ಗಳನ್ನು ಹಾಕಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.
ಒಟ್ಟಾರೆ ಸರ್ಕಾರ ನುಡಿದಂತೆ ನಡೆದು ಸೌಲಭ್ಯ ಕಲ್ಪಿಸದ ಹೊರತು ಪುನರ್ ವಸತಿ ಕೇಂದ್ರಗಳಿಗೆ ಹೋಗುವುದಿಲ್ಲ ಎಂದು ಆದಿವಾಸಿಗಳ ಪಟ್ಟು ಹಿಡಿದ್ದಿದ್ದಾರೆ.