Wednesday, January 22, 2025

ನಟಿ ರಮ್ಯಾ ವಿರುದ್ಧ 8 ಕೋಟಿ ರೂ. ದುರ್ಬಳಕೆ ಆರೋಪ

ಬೆಂಗಳೂರು :ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ನಡುವೆ ಡಿಕೆಶಿ ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ. ಇದು ಹೀಗೆ ಬಿಟ್ರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಅಂತ ಕಾಂಗ್ರೆಸ್‌ ವರಿಷ್ಠರು ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಂಧಾನ ಮಾಡುತ್ತಲೇ ಇದ್ದಾರೆ. ಆದ್ರೆ ಅದು ಯಾಕೋ ಫಲ ಕೊಡುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಈಗ ಎಲ್ಲ ಸರಿಯಾಗಿದೆ. ಪಕ್ಷದ ಸಂಘಟನೆ ಆಗಬೇಕು ಎನ್ನುವ ವೇಳೆಗೆ ಮತ್ತೆ ಶೀತಲ ಸಮರ ಶುರುವಾಗಿದೆ.

ಯಾವಾಗ ಸಚಿವ ಅಶ್ವತ್ಥ್‌ ನಾರಾಯಣ್ ರಕ್ಷಣೆಗಾಗಿ ಕಾಂಗ್ರೆಸ್ ನಾಯಕರ ಮನೆಗೆ ಹೋಗುತ್ತಿದ್ದಾರೆ ಅಂತ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ ನೀಡಿದ್ರೊ, ಅವಾಗಿನಿಂದ ಎಂ.ಬಿ.ಪಾಟೀಲ್ ಮತ್ತು ಅನೇಕ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ರು. ಇದಕ್ಕೆ ಮಾಜಿ ಸಂಸದೆ ರಮ್ಯಾ ಕೂಡ ಬೆಂಬಲಿಸಿ, ಬೇರೆ ಪಕ್ಷದವರು ಭೇಟಿ ಮಾಡುವುದರಲ್ಲಿ ಯಾವ ತಪ್ಪಿದೆ ಅಂತ ಪ್ರಶ್ನೆ ಮಾಡಿ ಟ್ವೀಟ್‌ ಮಾಡಿದ್ರು.

ರಮ್ಯಾ ಟ್ವೀಟ್‌ನಿಂದ ಹೊತ್ತಿಕೊಂಡ ಅಸಮಾಧಾನದ ಕಿಡಿ : 

ಎಂ.ಬಿ.ಪಾಟೀಲ್ ಬೆಂಬಲಿಸಿ ರಮ್ಯಾ ಟ್ವೀಟ್‌ ಮಾಡಿದ್ರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಲ್ ಆಗಿಯೇ ಉತ್ತರಿಸಿ ರಮ್ಯಾ ಕೂಡ ನಮ್ಮ ಪಕ್ಷದ ನಾಯಕಿ, ಎಲ್ಲೊ ಮಿಸ್ ಕಮ್ಯುನಿಕೇಷನ್ ಆಗಿದೆ ಅಂತ ಸಮಾಜಾಯಿಸಿ ಕೊಟ್ಟಿದ್ರು. ಆದ್ರೆ, ಡಿಕೆಶಿ ಬೆಂಬಲಿಗರು ಫುಲ್‌ ಆಕ್ಟೀವ್‌ ಆಗಿದ್ರು. ರಮ್ಯಾರ‌ ನಡೆ ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ರು. ಇದನ್ನು ಖಂಡಿಸಿ ಸ್ಯಾಂಡಲ್‌ವುಡ್ ಪದ್ಮಾವತಿ ಫುಲ್ ಗರಂ ಆದ್ರು. ಡಿಕೆಶಿ ಬೆಂಬಲಿಗರ ಟ್ರೋಲ್‌ಗಳನ್ನು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ರು. ಈ ಟ್ರೋಲ್‌ಗಳು ಕೆಪಿಸಿಸಿ ಅಧ್ಯಕ್ಷರ ಅಣತಿ ಯಂತೆ ಆಫೀಸ್‌ನಿಂದ ಹೊರ ಬಂದಿವೆ ಅಂತ ಆರೋಪ ‌ಮಾಡಿದ್ರು. ಆದ್ರೆ, ರಮ್ಯಾರ ಆರೋಪವನ್ನು ಡಿ.ಕೆ.ಶಿವಕುಮಾರ್ ತಳ್ಳಿ ಹಾಕಿದ್ದಾರೆ.

ರಮ್ಯಾ ವಿರುದ್ಧ ಎಂಟು ಕೋಟಿ ರೂ. ದುರ್ಬಳಕೆ ಆರೋಪ : 

ರಮ್ಯಾರ ಟ್ವೀಟ್‌ ಆಕ್ರೋಶವನ್ನು‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏನೋ ತಳ್ಳಿಹಾಕುತ್ತಿದ್ದಾರೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಸರಿಯಾದ ಮಾಹಿತಿ ತೆಗೆದುಕೊಂಡು ಮಾತನಾಡುತ್ತೇನೆ ಎಂದು ಡಿಕೆಶಿ ಜಾರಿಕೊಂಡ್ರು. ಆದ್ರೆ, ಮಾಜಿ ಸಂಸದೆ ರಮ್ಯಾ ಮಾತ್ರ ಸುಮ್ಮನಾಗಿಲ್ಲ. ಮತ್ತೆ ಸರಣಿ ಟ್ವೀಟ್‌ ಮಾಡುವ ಮೂಲಕ ಡಿಕೆಶಿ ಬೆಂಬಲಿಗರ ವಿರುದ್ಧ ಕಿಡಿ ಕಾರಿದ್ದಾರೆ. ವಿನಾಕಾರಣ ನನ್ನ ಮೇಲೆ 8 ಕೋಟಿ ರೂಪಾಯಿ ಹಣ ದುರ್ಬಳಕೆ ಆರೋಪವನ್ನು ಡಿಕೆಶಿ ಬೆಂಬಲಿಗರು ಮಾಡುತ್ತಿದ್ದಾರೆ. ನನ್ನನ್ನು ಯಾವ ನಾಯಕರು ರಾಜಕೀಯವಾಗಿ ಬೆಳಸಿಲ್ಲ. ರಾಹುಲ್ ಗಾಂಧಿ ಅವರಿಂದಾಗಿ‌ ನಾನು ರಾಜಕೀಯದಲ್ಲಿ ಇದ್ದೇನೆ. ಕೇಂದ್ರದ ನಾಯಕರು ಡಿಕೆಶಿ ಬೆಂಬಲಿಗರ ವರ್ತನೆಯನ್ನು ಗಮನಿಸಬೇಕು ಮತ್ತು ನನಗೆ ಸಹಾಯ ಮಾಡಬೇಕು. ಅಲ್ಲದೆ ನನ್ನ ವಿರುದ್ಧ 8 ಕೋಟಿ ರೂಪಾಯಿ ದುರ್ಬಳಕೆ ಮಾಡಿದ್ದೇನೆ ಅಂತ ಟ್ರೋಲ್‌ ಮಾಡಿ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲಗೆ ರಮ್ಯಾ ಮನವಿ ಮಾಡಿದ್ದಾರೆ.

“ನೀನೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತಲ್ಲೋ” :

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ನಟಿ ರಮ್ಯಾ ನಡುವೆ ಫೈಟ್ ವಿಚಾರದಲ್ಲಿ ರಾಜ್ಯ ಬಿಜೆಪಿ ಎಂಟ್ರಿಯಾಗಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಶಿವಕುಮಾರ್ ಅವರ ಕಾಲೆಳೆದಿದೆ. ಅಸಹಾಯಕ ಡಿಕೆಶಿ ಅವರೇ, ನೀವೇ ಬೆಳೆಸಿದ ಸೋಷಿಯನ್ ಮಿಡಿಯಾ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ರಮ್ಯಾ ನೇತೃತ್ವದಲ್ಲಿ ಮತ್ತಷ್ಟು ನಕಲಿ ಖಾತೆ ಜನಿಸಲಿದ್ದು, ನಿಮ್ಮದೇ ಮೂಗಿನ ಕೆಳಗೆ ನಿಮ್ಮ ವಿರುದ್ಧವೇ #ToolKit ಹಣಿಯಲಾಗುತ್ತಿದೆ ಅಂತ ವಿಡಿಯೋ ಅಟ್ಯಾಚ್‌ ಮಾಡಿ ಕಾಲೆಳೆದಿದೆ. ಅಷ್ಟೇ ಅಲ್ಲ, ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ” ಎಂದಿರುವ ಬಿಜೆಪಿ, ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಸ್ಥಿತಿ. ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ. ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂ ಬಿಟ್ಟಿದ್ದು ಮೀರ್‌ಸಾದಿಕ್‌ ಅವರಿರಬಹುದೇ? ಅಂತಲೇ ಬಿಜೆಪಿ ವ್ಯಂಗ್ಯವಾಡಿದೆ.

ಒಟ್ಟಿನಲ್ಲಿ ರಾಜಕೀಯ ಮತ್ತು ಬಣ್ಣದ ಲೋಕದಿಂದ ತೆರೆಮರೆಯಲ್ಲಿದ್ದ ಬ್ಯೂಟಿ ಕ್ವೀನ್ ರಮ್ಯಾ ಮತ್ತೆ ಸದ್ದು ಮಾಡುತ್ತಿದ್ದಾರೆ. ಅದು ತಮ್ಮದೇ ಪಕ್ಷದ ಅಧ್ಯಕ್ಷರು ಮತ್ತು ಬೆಂಬಲಿಗರ ವರ್ತನೆಯ ವಿರುದ್ಧ. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಆಂತರಿಕ ಸಂಘರ್ಷಕ್ಕೆ ಬ್ರೇಕ್ ಹಾಕುತ್ತಾ..? ಇಲ್ಲ ಬಣ ರಾಜಕೀಯ ಜಗಳವನ್ನು ಇನ್ನಷ್ಟು ಬೆಳೆಯಲು ಬಿಡುತ್ತ ಅಂತ ಕಾದು ನೋಡ್ಬೇಕು.

RELATED ARTICLES

Related Articles

TRENDING ARTICLES