ದಾವಣಗೆರೆ : ಶಾಸಕ ರೇಣುಕಾಚಾರ್ಯ 38 ಗುಂಟೆಯಲ್ಲಿ ಕಟ್ಟುತ್ತಿರುವ ಹೊಸ ಮನೆಗೆ ಕಂಟಕ ಎದುರಾಗಿದ್ದು 5 ಜನ ನೊಂದ ಮಹಿಳೆಯರಿಂದ ಹೊನ್ನಾಳಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಹೊರವಲಯದಲ್ಲಿ ತಮಗೆ ಸೇರಿದ ಆಸ್ತಿಯಲ್ಲಿ ಅಧಿಕಾರದ ಪ್ರಭಾವ ಬಳಸಿ ಜಮೀನು ಕಬಳಿಸಿ ರೇಣುಕಾಚಾರ್ಯ ಅವರು ಮನೆ ಕಟ್ಟುತ್ತಿದ್ದಾರೆ ಎಂದು ಐವರು ಮಹಿಳೆಯರು ಆರೋಪಿಸಿದ್ದಾರೆ.
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಮನೆಯು ಹೊನ್ನಾಳಿ ಪಟ್ಟಣದ ನಿವಾಸಿ ನಿಂಗಪ್ಪ ಎಂಬುವರಿಗೆ ಸೇರಿದ ಜಮೀನಾಗಿದೆ. ಇವರಿಗೆ ಮೂರು ಜನ ಪತ್ನಿಯರಿದ್ದು, ಮೂರನೇ ಪತ್ನಿಯಿಂದ ರಾಘವೇಂದ್ರ ಎಂಬುವರ ಹೆಸರಿಗೆ ಜಮೀನು ಮಾಡಿ ನಂತರ ತಮ್ಮ ಹೆಸರಿಗೆ ರೇಣುಕಾಚಾರ್ಯ ಅವರು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ತಮ್ಮ ಜಮೀನಿನಲ್ಲಿ ಮನೆ ಕಟ್ಟುವ ವಿಚಾರ ತಿಳಿದು ನಿಂಗಪ್ಪನ ಪುತ್ರಿ ವನಜಾಕ್ಷಮ್ಮ ಕೋರ್ಟ್ ಮೊರೆ ಹೋಗಿದ್ದಾರೆ. ಅದೇ ವೇಳೆ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಆಗಿತ್ತು. ಕೋರ್ಟ್ನಿಂದ ಇನ್ಜಕ್ಷನ್ ಆರ್ಡರ್ ಇದ್ದರು ಸಹ ಜೊತೆಗೆ ಕೋವಿಡ್ ಸಂಕಷ್ಟದ ಕಾಲದಲ್ಲಿಯೇ ಶಾಸಕ ಮನೆ ನಿರ್ಮಿಸಿದ್ದಾರೆ. ಇದೀಗ ಅವರ ವಿರುದ್ಧ ನ್ಯಾಯಲಯದಲ್ಲಿ ಮಹಿಳೆಯರು ಹೋರಾಟ ನಡೆಸಿದ್ದಾರೆ. ಸದ್ಯಕ್ಕೆ ಯಾವುದೇ ಕಟ್ಟಡ ಕಾಮಗಾರಿ ಆರಂಭಿಸದಂತೆ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.
ಇನ್ನು ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ನಾನು ಬೇರೆಯವರಿಂದ ತೆಗೆದುಕೊಂಡಿದ್ದೇನೆ. ನನಗು ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.