ವಾರಣಾಸಿ ಕಾಶಿ ವಿಶ್ವನಾಥ ದೇಗುಲ ಸನಿಹದಲ್ಲಿರುವ ಜ್ಞಾನವಾಪಿ ಮಸೀದಿ ಒಳಗಿನ ಸಮೀಕ್ಷೆಗೆ ಕೋರ್ಟ್ ಅಸ್ತು ಎಂದಿದೆ.. ಜೊತೆಗೆ, ಮೇ 17ರೊಳಗೆ ಪೂರ್ಣಗೊಳಿಸಿ ಎಂದು ಉತ್ತರ ಪ್ರದೇಶ ನ್ಯಾಯಾಲಯ ಸೂಚನೆ ನೀಡಿದೆ. ಈ ಮಧ್ಯೆ, ಪರ-ವಿರೋಧ ಚರ್ಚೆಗಳು ಜೋರಾಗ್ತಿವೆ.
ಜ್ಞಾನವಾಪಿ ಮಸೀದಿ ಒಳಗೆ ಸಮೀಕ್ಷೆ ನಡೆಸಲು ಆದೇಶ ನೀಡಲು ಕೋರಿ ಹಿಂದೂಪರ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದವು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶೀಘ್ರ ಸಮೀಕ್ಷೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ. ಜ್ಞಾನವಾಪಿ ಮಸೀದಿಯ ಒಳಗಿನ ಸಮೀಕ್ಷೆಯು ಮುಂದುವರಿಯಲಿದ್ದು, ಮೇ 17ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವಾರಣಾಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದೆ.
ಕಳೆದ ಶುಕ್ರವಾರದಂದು ಸಮೀಕ್ಷೆ ಆರಂಭಗೊಂಡಿದ್ದರೂ ಮಸೀದಿಯೊಳಗೆ ವೀಡಿಯೋಗ್ರಫಿ ವಿವಾದದ ಕಾರಣ ಪೂರ್ಣಗೊಂಡಿರಲಿಲ್ಲ. ಜ್ಞಾನವಾಪಿ ಮಸೀದಿಯ ಉಸ್ತುವಾರಿ ಸಮಿತಿ ಮತ್ತು ಅದರ ವಕೀಲರು ಮಸೀದಿಯೊಳಗೆ ಯಾವುದೇ ವೀಡಿಯೊಗ್ರಫಿಯನ್ನು ವಿರೋಧಿಸುವುದಾಗಿ ಹೇಳಿದ್ದರು. ಅರ್ಜಿದಾರರ ಪರ ವಕೀಲರು ವಿಡಿಯೋಗ್ರಫಿ ಮಾಡಲು ನ್ಯಾಯಾಲಯದ ಅನುಮತಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ವಾರಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಹಿಂದೂ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆ ಸಲ್ಲಿಸಲು ಐದು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಗಳ ಮೇಲೆ ನ್ಯಾಯಾಲಯವು ಈ ವರ್ಷದ ಏಪ್ರಿಲ್ ನಲ್ಲಿ ಪರಿಶೀಲನೆಗೆ ಆದೇಶಿಸಿತ್ತು. ಪ್ರಸ್ತುತ ಈ ತಾಣವನ್ನು ವರ್ಷಕ್ಕೊಮ್ಮೆ ಪ್ರಾರ್ಥನೆಗಾಗಿ ತೆರೆಯಲಾಗಿದೆ. ಮಹಿಳೆಯರು ಹಳೆಯ ದೇವಾಲಯದ ಸಂಕೀರ್ಣದಲ್ಲಿ ಪ್ರಾರ್ಥಿಸಲು ಅನುಮತಿಯನ್ನು ಬಯಸಿದ್ದಾರೆ. ಈ ಹಿಂದೆ ಮೇ 10ರೊಳಗೆ ವರದಿ ಸಲ್ಲಿಸುವಂತೆ ಸ್ಥಳೀಯ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು.
ಜ್ಞಾನವಾಪಿ ಮಸೀದಿಯ ಶೃಂಗಾರ್ ಗೌರಿ ಕಾಂಪ್ಲೆಕ್ಸ್‌ನ ವಿಡಿಯೊ ಸಮೀಕ್ಷೆಗೆ ನೇಮಕ ಮಾಡಲಾಗಿರುವ ಅಡ್ವೊಕೇಟ್ ಕಮೀಷನರ್ ಬದಲಾವಣೆಗೆ ನಿರಾಕರಿಸಿರುವ ವಾರಾಣಸಿಯ ಜಿಲ್ಲಾ ನ್ಯಾಯಾಲಯವು, ಅವರಿಗೆ ನೆರವು ನೀಡಲು ಇನ್ನೂ ಇಬ್ಬರು ಸಹಾಯಕ ಕಮೀಷನರ್ಗಳನ್ನು ನೇಮಿಸಿದೆ.
ಏಪ್ರಿಲ್ 18, 2021ರಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆಯರು ಮಸೀದಿ ಗೊಡೆ ಮೇಲಿರುವ ವಿಗ್ರಹಗಳಿಗೆ ಯಾವುದೇ ಹಾನಿ ಮಾಡದಂತೆ ತಡೆಯಲು ನ್ಯಾಯಾಲಯದ ಆದೇಶವನ್ನು ಕೋರಿದ್ದರು. ಆದರೆ, ಮಸೀದಿಯೊಳಗೆ ವಿಡಿಯೊಗ್ರಫಿ ಮಾಡಲು ನ್ಯಾಯಾಲಯವು ಯಾವುದೇ ಆದೇಶವನ್ನು ನೀಡಿಲ್ಲ. ಮಸೀದಿ ಪ್ರದೇಶವನ್ನು ಸುತ್ತುವರಿದ ಬ್ಯಾರಿಕೇಡ್ಗಳ ಹೊರಗೆ ಮಾತ್ರ ಸಮೀಕ್ಷೆ ಮಾಡಬೇಕೆಂದು ಮಸೀದಿ ಆಡಳಿತ ಸಮಿತಿಯ ವಕೀಲರು ಈ ಹಿಂದೆ ವಾದಿಸಿದ್ದರು. ನ್ಯಾಯಾಲಯದ ಆಯುಕ್ತರು ಶುಕ್ರವಾರ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿರುವ ಮಸೀದಿಯ ಹೊರಗಿನ ಕೆಲವು ಪ್ರದೇಶಗಳಲ್ಲಿ ಎರಡು ಕಡೆಯವರ ಘೋಷಣೆಗಳ ನಡುವೆ ಅನಿರ್ದಿಷ್ಟ ಸಮೀಕ್ಷೆಯನ್ನು ನಡೆಸಿದ್ದರು.
ಈ ವೇಳೆ, ನ್ಯಾಯಾಲಯದಿಂದ ನೇಮಕಗೊಂಡ ಕಮಿಷನರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಮುಸ್ಲಿಂ ಕಡೆಯವರು ಆರೋಪಿಸಿದ್ದರು. ಕೋರ್ಟ್ ಆದೇಶವಿಲ್ಲದೆ ಅವರು ಜ್ಞಾನವಾಪಿ ಮಸೀದಿಯೊಳಗೆ ವಿಡಿಯೋಗ್ರಫಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿ ಅವರನ್ನು ಬದಲಾಯಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ, ಹಿಂದೂ ಸಂಘಟನೆಗಳಿಗೆ ಗೆಲುವಾಗಿದ್ದು, ವಿಡಿಯೋ ಚಿತ್ರೀಕರಣದ ಮೂಲಕ ಸಮೀಕ್ಷೆ ನಡೆಯಲಿದೆ.