ಹಾವೇರಿ : ಸರ್ಕಾರ ಬಡವರು ಹಾಗೂ ವೃದ್ಧರಿಗಾಗಿ ಹಲವಾರು ಯೋಜನೆ ಜಾರಿ ಮಾಡುತ್ತಿದೆ. 60 ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯವೇತನ ನೀಡುತ್ತಾರೆ.ಆದರೆ, ಸರ್ಕಾರದ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ. ಸರ್ಕಾರಿ ಉದ್ಯೋಗ, 35 ರಿಂದ 40 ವರ್ಷದ ವಯೋಮಾನದ ವ್ಯಕ್ತಿಗಳು ವೃದ್ಧಾಪ್ಯವೇತನ ಪಡೆಯುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ.
ಸಿಎಂ ತವರಿನಲ್ಲೇ ವೃದ್ಧರಿಗೆ ಮಹಾಮೋಸವಾಗುತ್ತಿದೆ.ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ಸುಮಾರು 108 ಅನರ್ಹರು ವೃದ್ಧಾಪ್ಯ ವೇತನ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.ಇನ್ನೂ ದುರಂತ ಅಂದ್ರೆ ಇದರಲ್ಲಿ ಬಹಳಷ್ಟು ಜನ ಸರ್ಕಾರಿ ನೌಕರರ ಸಂಬಂಧಿಗಳೇ ಆಗಿದ್ದಾರೆ.ಪೊಲೀಸ್ ಇಲಾಖೆ, ಗ್ರಂಥಾಲಯ ಇಲಾಖೆ, ಹಾಗೂ ಅರಣ್ಯ ಇಲಾಖೆ ನೌಕರರ ಪತ್ನಿಯರು ಹೀಗೆ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ.ಅಲ್ಲದೆ, 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಲವಾರು ಜನರು ಅಧಿಕಾರಿಗಳಿಗೆ ನಕಲಿ ದಾಖಲೆ ಸಲ್ಲಿಸಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ.ಕಳೆದ 2 ವರ್ಷಗಳಿಂದ ಹೀಗಾಗುತ್ತಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ.
ಬಡ ಅರ್ಹ ಫಲಾನುಭವಿಗಳು ವೃದ್ಧಾಪ್ಯವೇತನ ಸಿಗದೆ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ತಹಶೀಲ್ದಾರರು ಅರ್ಹರಿಗೆ ನ್ಯಾಯ ಕೊಡಿಸಬೇಕೆಂದು ನೊಂದವರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ವಯೋವೃದ್ಧರಿಗೆ ಆರೋಗ್ಯ, ಜೀವನೋಪಾಯಕ್ಕಾಗಿ ವೃದ್ಧಾಪ್ಯವೇತನ ನೀಡಿದರೆ, ಅನರ್ಹರು, ಅದರಲ್ಲೂ ಕಡಿಮೆ ವಯಸ್ಸಿನವರೂ ಅದನ್ನು ಪಡೆಯುತ್ತಿರುವುದು ದುರಂತ.