ಹಾಸನ : PSI ನೇಮಕಾತಿಯಲ್ಲಿ ಅಕ್ರಮ ವಿಚಾರ ಹಿನ್ನೆಲೆ ನೇಮಕಾತಿಯಲ್ಲಿ ಯಾವ ಪಕ್ಷದವರೇ ಅಕ್ರಮ ಮಾಡಿದ್ದರೂ ಸಿ ಐಡಿ ಅಧಿಕಾರಿಗಳು ಕಟ್ಟು ನಿಟ್ಟಾಗಿ ಮಾಡಬೇಕು ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
PSI ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಯಾವ ಪಕ್ಷದವರೇ ಇದ್ದರೂ ಕ್ರಮ ಕೈಗೊಳ್ಳಲಿ. ಯಾರೋ ಬಡವರು ಹೊಲಮನೆ ಮಾರಿ ಪಿಎಸ್‌ಐ ಆಗುತ್ತಾನೆ ಎಂಬ ಆಸೆಯಿಂದ ಕೊಟ್ಟಿರುತ್ತಾರೆ. ಆದ್ದರಿಂದ ಹಣವನ್ನೂ ವಾಪಾಸ್ಸು ಕೊಡಿಸಬೇಕು ಎಂದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಗರಣ ನಡೆದಿದೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕೂಡಲೇ ತನಿಖೆಮಾಡಿ ಯಾರು ತಪ್ಪಿತಸ್ಥರಿದ್ದಾರೆ ಬಲಿ ಹಾಕಲಿ. ನನ್ನ ವಿರುದ್ಧ ಬೇಕಾದರೂ ಅವರು ತನಿಖೆ ಮಾಡಿಸಲಿ. ತನಿಖೆ ನಡೆಸುವಾಗ ನಾವು ಮಧ್ಯ ಪ್ರವೇಶ ಮಾಡುವುದು ಒಳ್ಳೆಯದಲ್ಲ ಎಂದರು.
ಇನ್ನು ಶಿವಲಿಂಗೇಗೌಡ, ರಾಮಸ್ವಾಮಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜನ ಕಳಿಸುತ್ತೇವೆ ಎಂದಿದ್ದಾರೆ. ಕೆಲವು ಕಾರ್ಯ ಒತ್ತಡದಿಂದ ಅವರು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ಮತ್ತು ಇಬ್ಬರೂ ದೂರವಾಣಿ ಮೂಲಕ ಯಾವುದೇ ಕಾರಣಕ್ಕೂ ದೇವೇಗೌಡರನ್ನ ಹಾಗೂ ಜೆಡಿಎಸ್ ಬಿಟ್ಟುಹೋಗುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.