ಶಿವಮೊಗ್ಗ : ಆಜಾನ್ ಅಭಿಯಾನಕ್ಕಿಂತ ಆರೋಗ್ಯದ ಪ್ರಶ್ನೆ ಇದೆ ಹೀಗಾಗಿ ಈ ಬಗ್ಗೆ ಸರ್ಕಾರ ಶೀಘ್ರದಲ್ಲಿ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಆದೇಶವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಲಿದೆ. ಇದು ಧರ್ಮದ ಪ್ರಶ್ನೆ ಅಲ್ಲ.ಜನರ ಆರೋಗ್ಯದ ಪ್ರಶ್ನೆ. ಹೀಗಾಗಿ ಸರ್ಕಾರದ ಮಾರ್ಗಸೂಚಿ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಅನ್ವಯಿಸುತ್ತದೆ ಎಂದರು.
ಇನ್ನು ಪಿಎಸ್ಐ ನೇಮಕ ಹಗರಣದ ತನಿಖೆ ಸರಿಯಾಗಿ ನಡೆದಿದೆ. ಆದರೂ ವಿರೋಧ ಪಕ್ಷದವರು ಭೂಕಾಳಿ ಬಿಡುತ್ತಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಸಿಐಡಿಗೆ ನೀಡಲಿ. ಈ ಹಗರಣದಲ್ಲಿ ಪ್ರಿಯಾಂಕ ಖರ್ಗೆ ಎಡ ಮತ್ತು ಬಲದಲ್ಲಿದ್ದವರೆ ಕಿಂಗ್ ಪಿನ್ ಗಳು. ಬ್ಯಾಂಕ್ ನಲ್ಲಿದ್ದ ಲಾಕರ್ ನಲ್ಲಿ ಚಿನ್ನ ಪತ್ತೆಯಾಗಿರುವುದು ಖರ್ಗೆಯವರ ಕಡೆಯವರದ್ದೆ. 2015 ರ ಎಪಿಪಿ ಪರೀಕ್ಷೆ ಮತ್ತು 2015 ರ ಪಿಯುಸಿ ಪರೀಕ್ಷೆ ಹಗರಣ ಹೇಗೆ ಆಯಿತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಅದುವಲ್ಲದೇ, ನಾವು ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದೇವೆ. ಇದಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಬಂಧನವಾಗುತ್ತಿರುವುದೇ ಸಾಕ್ಷಿ. ಬೆಂಗಳೂರಿನಲ್ಲಿ ಜೀವಂತ ಮದ್ದುಗುಂಡು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.