Monday, December 23, 2024

ಹೇಗಿರಲಿದೆ ರಜಿನಿ- ಶಿವಣ್ಣನ ಹೈವೋಲ್ಟೇಜ್ ವೆಂಚರ್..?

ಸೂಪರ್ ಸ್ಟಾರ್ ರಜಿನೀಕಾಂತ್​ರ 169ನೇ ಪ್ರಾಜೆಕ್ಟ್​​ನಲ್ಲಿ ನಟಿಸೋ ಮೂಲಕ ಪಕ್ಕದ ಕಾಲಿವುಡ್​ಗೆ ಕಾಲಿಡ್ತಿದ್ದಾರೆ ನಮ್ಮ ಸ್ಯಾಂಡಲ್​ವುಡ್ ಕಿಂಗ್ ಡಾ. ಶಿವರಾಜ್​ಕುಮಾರ್. ಕಥೆ ಕೇಳಿ ಥ್ರಿಲ್ ಆಗಿರೋ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ತಲೈವಾ- ಕರುನಾಡ ಚಕ್ರವರ್ತಿಯ ಜುಗಲ್​ಬಂದಿ ಹೇಗಿರಲಿದೆ ಎಂಬುದನ್ನು ನೋಡಬೇಕಾಗಿದೆ.

  • ಶಿವಣ್ಣನ ಶ್ರೀಮುತ್ತು ನಿವಾಸದಲ್ಲಿ ಬೀಸ್ಟ್ ಡೈರೆಕ್ಟರ್ ನೆಲ್ಸನ್
  • ತಮಿಳು ಸಿನಿಮಾದಲ್ಲಿ ನಟಿಸೋಕೆ ಲೀಡರ್ ಗ್ರೀನ್ ಸಿಗ್ನಲ್
  • ಹೇಗಿರಲಿದೆ ರಜಿನಿ- ಶಿವಣ್ಣನ ಹೈವೋಲ್ಟೇಜ್ ವೆಂಚರ್..?
  • ಇದು ಗೆಸ್ಟ್ ಅಪ್ಪಿಯರೆನ್ಸ್ ಆದ್ರೂ ಸರ್​ಪ್ರೈಸಿಂಗ್ ರೋಲ್

ಶಿವಾಜಿ ಚಿತ್ರದಿಂದ ಈಚೆಗೆ ಸೂಪರ್ ಸ್ಟಾರ್ ರಜಿನೀಕಾಂತ್ ಮತ್ತಷ್ಟು ಸ್ಟೈಲಿಶ್ ಆದ್ರು. ಕಾರಣ ಅವರನ್ನ ಹುಡುಕಿಕೊಂಡು ಬಂದ ಪಾತ್ರಗಳು ಹಾಗೂ ಸಿನಿಮಾಗಳು. ಸ್ಟೈಲ್ ಐಕಾನ್ ಆಗಿ ಮಿಂಚಿದ ತಲೈವಾ, ಸಾಲು ಸಾಲು ಕಮರ್ಷಿಯಲ್ ಎಂಟರ್​ಟೈನರ್​ಗಳಿಂದ ಇಂದಿಗೂ ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಆಗಿಯೇ ಪ್ರೇಕ್ಷಕರ ಮನದಲ್ಲಿ ಉಳಿದಿದ್ದಾರೆ.

 

ಲಿಂಗಾ, ಕಬಾಲಿ, ಕಾಲ, ಪೆಟ್ಟಾ, ದರ್ಬಾರ್, ಅಣ್ಣಾಥೆ ಹೀಗೆ ಆಲ್ಮೋಸ್ಟ್ ಎಲ್ಲವೂ ವೆರೈಟಿ ಜಾನರ್ ಸಿನಿಮಾಗಳು. ಆದ್ರೆ ಌಕ್ಷನ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಸ್ಟೈಲ್ ಕೇರ್ ಆಫ್ ಅಡ್ರೆಸ್. ರಜಿನಿ ಸಿನಿಮಾಗಳು ಅಂದ್ರೆ ಇಂದಿಗೂ ಅದೇ ಕ್ರೇಜ್. ಅದೇ ಸಂಭ್ರಮ. ಸದ್ಯ 169ನೇ ಚಿತ್ರ ಮಾಡಲಿರೋ ಸೂಪರ್ ಸ್ಟಾರ್​ ಕನ್ನಡದ ಕರುನಾಡ ಚಕ್ರವರ್ತಿಗೆ ಗಾಳ ಹಾಕಿದ್ದಾರೆ.

ರಜಿನೀಕಾಂತ್ 169ನೇ ಚಿತ್ರದಲ್ಲಿ ನಮ್ಮ ಸನ್ ಆಫ್ ಬಂಗಾರದ ಮನುಷ್ಯ ಶಿವಣ್ಣ ನಟಿಸೋದು ಪಕ್ಕಾ ಆಗಿದೆ. ಡಾಕ್ಟರ್, ಬೀಸ್ಟ್ ಸಿನಿಮಾಗಳ ಡೈರೆಕ್ಟರ್ ನೆಲ್ಸನ್ ಅದಕ್ಕೆ ಌಕ್ಷನ್ ಕಟ್ ಹೇಳ್ತಿದ್ದು, ರಜಿನಿ ಜೊತೆ ಶಿವಣ್ಣನನ್ನೂ ಚಿತ್ರದ ತಾರಾಗಣದಲ್ಲಿ ಇರಿಸೋದ್ರಲ್ಲಿ ಯಶಸ್ವಿ ಆಗಿದ್ದಾರೆ. ರೀಸೆಂಟ್ ಆಗಿ ನಾಗವಾರದ ಶಿವಣ್ಣನ ಶ್ರೀಮುತ್ತು ನಿವಾಸಕ್ಕೆ ಭೇಟಿ ನೀಡಿ ಕಥೆ ಹೇಳಿ ಇಂಪ್ರೆಸ್ ಮಾಡಿದ್ದಾರೆ.

ಕಥೆ ಕೇಳಿ ವ್ಹಾವ್ ಫೀಲ್ ಬಂದಿದ್ದು, ಶಿವಣ್ಣ ಕೂಡ ಕೂಡಲೇ ರಜಿನೀಕಾಂತ್ ಜೊತೆ ನಟಿಸೋಕೆ ಜೈ ಅಂದಿದ್ದಾರೆ. ಅಂದಹಾಗೆ ಶಿವಣ್ಣನ ಪಾತ್ರ ಸಖತ್ ಸರ್​ಪ್ರೈಸಿಂಗ್ ಆಗಿರಲಿದೆಯಂತೆ. ಪೂರ್ಣ ಪ್ರಮಾಣದ ಪಾತ್ರ ಆಗಿರದೆ ಎರಡು ಮೂರು ದಿನದಲ್ಲಿ ಶೂಟಿಂಗ್ ಮುಗಿಯೋ ಅಂತಹ ಗೆಸ್ಟ್ ಅಪ್ಪಿಯರೆನ್ಸ್ ಎನ್ನಲಾಗ್ತಿದೆ. ಆ್ಯಕ್ಷನ್ ಕಮ್ ಫ್ಯಾಮಿಲಿ ಎಂಟರ್​ಟೈನರ್ ಆಗಿರೋದ್ರಿಂದ ಕೂಡಲೇ ಶಿವಣ್ಣ ಓಕೆ ಮಾಡಿದ್ದಾರೆ.

ಸದ್ಯ ಬೈರಾಗಿ ಶೂಟಿಂಗ್ ಮುಗಿಸಿರೋ ಶಿವಣ್ಣ, ತಮ್ಮದೇ ಹೋಮ್ ಪ್ರೊಡಕ್ಷನ್​ನಲ್ಲಿ ತಯಾರಾಗ್ತಿರೋ ವೇದ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ, ಯೋಗರಾಜ್ ಭಟ್​ರ ಇನ್ನೂ ಹೆಸರಿಡದ ಸಿನಿಮಾನ ಸದ್ಯದಲ್ಲೇ ಕಿಕ್​ಸ್ಟಾರ್ಟ್​ ಮಾಡೋದರಲ್ಲಿದ್ದಾರೆ. ಇವೆಲ್ಲದರ ಮಧ್ಯೆ ತಮಿಳು ಇಂಡಸ್ಟ್ರಿಗೂ ಕಾಲಿಡ್ತಿರೋ ಶಿವಣ್ಣ, ಕನ್ನಡ ಚಿತ್ರರಂಗದ ದೊಡ್ಮನೆ ಹಾಗೂ ರಜಿನಿಗಿರೋ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸ್ತಿದ್ದಾರೆ.

ಈ ಹಿಂದೆ ಸಹೋದರ ಸಮಾನ ನಂದಮೂರಿ ಬಾಲಕೃಷ್ಣ ನಟನೆಯ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಅವ್ರ ಆತ್ಮೀಯ ಆಮಂತ್ರಣಕ್ಕೆ ಮಣಿದು ಸಣ್ಣದೊಂದು ಅತಿಥಿ ಪಾತ್ರ ಮಾಡಿದ್ರು ಡಾ. ಶಿವಣ್ಣ. ಒಟ್ಟಾರೆ ಸಿನಿಮಾಗೆ ಭಾಷೆ, ಜಾತಿ, ಧರ್ಮ, ಗಡಿಯ ಹಂಗಿಲ್ಲ ಅನ್ನೋದು ಪ್ರೂವ್ ಆಗಿದೆ. ಈ ರೀತಿಯ ಮಲ್ಟಿಸ್ಟಾರ್​ ಸಿನಿಮಾಗಳಿಂದ ಸಂಬಂಧಗಳು ಮಗದಷ್ಟು ಗಟ್ಟಿಗೊಳ್ಳಲಿವೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES