Monday, December 23, 2024

ಎಂ.ಬಿ.ಪಾಟೀಲ್‌ರನ್ನು ಭೇಟಿಯಾದ್ರಾ ಸಚಿವ ಅಶ್ವತ್ಥ್‌ ನಾರಾಯಣ್..?

ಬೆಂಗಳೂರು: ಇದೊಂದು ಬಹಳ ಇಂಟರೆಸ್ಟಿಂಗ್ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ನಾನಾ ಬೆಳವಣಿಗೆಗಳು ನಡೆಯುತ್ತಿವೆ. 40% ಕಮಿಷನ್, ಪಿಎಸ್‌ಐ ನೇಮಕಾತಿ ಅಕ್ರಮ, ಸಹಾಯಕ ಪ್ರಾಧ್ಯಾಪಕರ ನೇಮಕ ಹಾಗೂ ಬಮೂಲ್ ನೇಮಕಾತಿಯಲ್ಲಿ ಕೋಟಿ ಕೋಟಿ ಅವ್ಯವಹಾರ ಆಗಿದೆ ಎಂಬ ಆರೋಪ ಹೊರಬಿದ್ದಿವೆ. ಈ ಕಾರಣಗಳಿಗೆ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಮುಂದುವರಿಸಿದೆ.

ಇದೇ ಹೊತ್ತಲ್ಲೇ ಸಂಪುಟ ದರ್ಜೆಯ ಪ್ರಭಾವಿ ಸಚಿವ ಅಶ್ವತ್ಥ್‌ ನಾರಾಯಣ್, ಮಾಜಿ ಸಚಿವ ಹಾಗು ಹಾಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರನ್ನ ಭೇಟಿ ಮಾಡಿರೋದು ಹಲವು ಕೌತುಕಗಳಿಗೆ ಕಾರಣವಾಗಿದೆ. ನಿನ್ನೆ ರಾತ್ರಿ ಸದಾಶಿವನಗರದ ಎಂ ಬಿ ಪಾಟೀಲ್ ನಿವಾಸಕ್ಕೆ ಭೇಟಿ ಕೊಟ್ಟು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆಂಬ ಮಾಹಿತಿ ಹರಿದಾಡ್ತಿದೆ. ಆರೋಪ ಹೊತ್ತಿರುವ ಸಚಿವರು ಹಾಗು ಆರೋಪದ ವಿರುದ್ಧ ಹೋರಾಡ್ತಿರುವ ಪ್ರತಿಪಕ್ಷ ನಾಯಕನನ್ನ ಭೇಟಿ ಮಾಡಿದ್ದೇಕೆ..? ಹಾಗಾದ್ರೆ, ಅವರು ಮಾತನಾಡಿದ್ದೇನು..? ಅನ್ನೋದ್ರ ಬಗ್ಗೆ ಹತ್ತು ಹಲವು ಚರ್ಚೆಗೆ ಕಾರಣವಾಗಿದೆ.

ಅಶ್ವತ್ಥ್‌ ನಾರಾಯಣ್, ಎಂ ಬಿ ಪಾಟೀಲರನ್ನ ಭೇಟಿ ಮಾಡಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಸ್ತುತ 545 ಪಿಇಎಸ್‌ಐ ಹಾಗೂ ಉನ್ನತ ಶಿಕ್ಷಣ ಇಲಾಖೆಯ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಸಚಿವ ಅಶ್ವತ್ಥ್‌ ನಾರಾಯಣ್ ಸಹೋದರ ಸತೀಶ್, ದರ್ಶನ್ ಗೌಡ ಎಂಬುವರ ಬಳಿ 80 ಲಕ್ಷ ರೂಪಾಯಿ ಪಡೆದಿದ್ದಾರೆಂಬ ಆರೋಪ ಹೊರಬಿದ್ದಿದೆ. ಮತ್ತೊಂದು ಕಡೆ ಉನ್ನತ ಶಿಕ್ಷಣ ಇಲಾಖೆಯಲ್ಲೂ ತಮ್ಮ ಸಂಬಂಧಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಜೊತೆಗೂಡಿ ಅಶ್ವತ್ಥ್‌ ನಾರಾಯಣ್ ಒಂದೊಂದು ಹುದ್ದೆಗಳಿಗೆ 15 ರಿಂದ 20 ಲಕ್ಷ ರೂಪಾಯಿ ಪಡೆದಿದ್ದಾರೆಂಬ ಆರೋಪವೂ ಎದುರಾಗಿದೆ. ಎರಡೂ ವಿಚಾರಗಳಲ್ಲಿ ಕಾಂಗ್ರೆಸ್ ನಾಯಕರು ಎಡೆಬಿಡದೆ ಹೋರಾಟ ಮುಂದುವರಿಸಿದ್ದಾರೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಅಶ್ವತ್ಥ್‌ ನಾರಾಯಣ್‌ ಮೇಲೆ ವೈಯಕ್ತಿಕ ಜಿದ್ದು ಸಾಧಿಸುತ್ತಿದ್ದಾರೆ.

ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಶ್ವತ್ಥ್‌ ನಾರಾಯಣ್ ಹೆಸರು ಕೇಳಿ ಬರ್ತಿದೆ. ಹೀಗಾಗಿ ಈ ಪ್ರಕರಣದ ಆರೋಪ ಎದುರಾಗಿರೋದ್ರಿಂದ ವರಿಷ್ಠರ ಮಟ್ಟದಲ್ಲಿ ಮುಜುಗರವಾಗಿದೆ. ತಮ್ಮ ನಿರೀಕ್ಷೆಗಳು ಪಾತಾಳ ಸೇರ್ತಿವೆ. ಹೀಗಾಗಿ ಇದ್ರಿಂದ ಹೊರ ಬರಬೇಕಂದ್ರೆ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಬೇಕು. ಹೇಳಿ ಕೇಳಿ ಡಿಕೆಶಿ ವೈಯಕ್ತಿಕ ಜಿದ್ದಿಗೆ ತೆಗೆದುಕೊಂಡಿದ್ದಾರೆ. ಅವರನ್ನ ಸುಮ್ಮನಿರಿಸೋಕೆ ಆಗಲ್ಲ. ಆದ್ದರಿಂದ ಸಿದ್ದರಾಮಯ್ಯನವರನ್ನ ಸುಮ್ಮನಿರಿಸಿದ್ರೆ ಸಾಕು ಎಲ್ಲವೂ ಸ್ಥಬ್ದವಾಗಲಿದೆ ಎಂಬ ನಿರ್ಧಾರಕ್ಕೆ ಅಶ್ವಥ್ ನಾರಾಯಣ್ ಬಂದಿದ್ದಾರೆನ್ನಲಾಗ್ತಿದೆ. ಹಾಗಾಗಿಯೇ ಸಿದ್ದು ಪರಮಾಪ್ತರಾಗಿರುವ ಎಂಬಿ ಪಾಟೀಲ್ ಮೂಲಕ ಸಿದ್ದರಾಮಯ್ಯ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಆದ್ರೆ ಭೇಟಿಯನ್ನ ಇಬ್ಬರೂ ನಾಯಕರು ನಿರಾಕರಿಸಿದ್ದಾರೆ.

ಇನ್ನು ಎಂಬಿ ಪಾಟೀಲ್ ಹಾಗೂ ಅಶ್ವತ್ಥ್‌ ನಾರಾಯಣ್ ಭೇಟಿಯ ಬಗ್ಗೆ ಡಿಕೆಶಿ ಬೆಂಬಲಿಗರೇ ಲೀಕ್ ಮಾಡಿದ್ದೆಂಬ ಮಾತುಗಳು ಕೇಳಿ ಬರ್ತಿವೆ. ಹೇಗಿದ್ರೂ ಎಂ.ಬಿ. ಪಾಟೀಲ್ ಸಿದ್ದರಾಮಯ್ಯನವರ ಹ್ಯಾಂಡ್. ಹಾಗಾಗಿ ಪಿಎಸ್‌ಐ ನೇಮಕ ಅಕ್ರಮದ ಬಗ್ಗೆ ನಾವು ಹೋರಾಡ್ತಿದ್ದೇವೆ. ಇವ್ರು ನೋಡಿದ್ರೆ ಅಕ್ರಮ ಮಾಡಿದವರ ಜೊತೆಗೆ ಸೇರಿಕೊಂಡಿದ್ದಾರೆಂಬ ಮೆಸೇಜ್ ರವಾನಿಸುವ ಉದ್ದೇಶ ಹಾಗೂ ಸಿದ್ದರಾಮಯ್ಯನವರ ಸಹಕಾರವೂ ಇದೆ ಅನ್ನೋದನ್ನ ಬಿಂಬಿಸೋದು. ಈ ಮೂಲಕ ವರಿಷ್ಠರ ಮಟ್ಟದಲ್ಲಿ ಸಿದ್ದರಾಮಯ್ಯನವರ ಹೆಸರನ್ನ ಡ್ಯಾಮೇಜ್ ಮಾಡೋ ಪ್ರಯತ್ನ ಡಿಕೆಶಿ ಮಾಡುತ್ತಿದ್ದಾರೆ. ಅಲ್ಲದೆ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪ ಮರೆಮಾಚಿ ಪಕ್ಷದಲ್ಲಿ ಮತ್ತಷ್ಟು ಸ್ಟ್ರಾಂಗ್ ಆಗುವ ಲೆಕ್ಕಾಚಾರಕ್ಕೆ ಡಿಕೆಶಿ ಕೈ ಹಾಕಿದ್ದಾರೆ.

ಒಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ರಾತ್ರೋರಾತ್ರಿ ಕಾಂಗ್ರೆಸ್ ನಾಯಕ ಎಂಬಿ ಪಾಟೀಲರ ಬಾಗಿಲು ತಟ್ಟಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

RELATED ARTICLES

Related Articles

TRENDING ARTICLES