ಶ್ರೀಲಂಕಾ : ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿರಂತರ ಪ್ರತಿಭಟನೆಗಳಿಗೆ ಮಣಿದಿರುವ ಶ್ರೀಲಂಕಾದ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಿಂದಾ ರಾಜಪಕ್ಸ ಅವರು ತಮ್ಮ ಕಿರಿಯ ಸಹೋದರ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.
1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, ಅತ್ಯಂತ ಭೀಕರ ಎನ್ನಲಾದ ಆರ್ಥಿಕ ಬಿಕ್ಕಟ್ಟಿಗೆ ಶ್ರೀಲಂಕಾ ಸಿಲುಕಿದೆ. ವಿದೇಶಿ ಕರೆನ್ಸಿಯ ತೀವ್ರ ಕೊರತೆಯಿಂದಾಗಿ ಆಹಾರ, ಔಷಧಿ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಆಮದಿಗೂ ತೊಡಕಾಗಿದೆ. ಅಗತ್ಯ ವಸ್ತುಗಳ ಕೊರತೆ ಜೊತೆಗೆ ತೀವ್ರ ಬೆಲೆ ಏರಿಕೆ ಅಲ್ಲಿನ ಜನರನ್ನು ಹೈರಾಣಾಗಿಸಿದೆ. ಹೀಗಾಗಿ, ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಅಧಿಕಾರಿಗಳು ದೇಶದಾದ್ಯಂತ ಕರ್ಫ್ಯೂ ಘೋಷಣೆ ಮಾಡಿದ್ದಾರೆ.
ಈ ನಡುವೆ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಚೇರಿಯ ಹೊರಗೆ ಸರ್ಕಾರದ ಪರವಾದ ಗುಂಪುಗಳು, ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ಬಳಿಕ ರಾಜಧಾನಿ ಕೊಲಂಬೊದಲ್ಲಿ ಸೇನೆ ನಿಯೋಜಿಸಲಾಗಿದೆ. ಗುಂಪು ಘರ್ಷಣೆಯಲ್ಲಿ 23 ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರು ಪ್ರಧಾನಿಯವರ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ಎದುರು ಪ್ರತಿಭಟನೆ ನಡೆಸಿ, ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡದಂತೆ ಒತ್ತಾಯಿಸಿದರು. ಸರ್ಕಾರಿ ವಿರೋಧಿ ಪ್ರತಿಭಟನಾಕಾರರೊಂದಿಗೆ ಘರ್ಷಣೆ ನಡೆಸಿದರು. ಗಾಯಗೊಂಡಿರುವ ಕನಿಷ್ಠ 16 ಜನರನ್ನು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರ್ವಜನಿಕರು ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿದ ಬೆನ್ನಲ್ಲೇ ರಾಜಪಕ್ಷ ರಾಜೀನಾಮೆ ನೀಡಿದ್ದಾರೆ.