ಮೈಸೂರು: ಸುಪ್ರಭಾತ ಹಾಕಲು ಹೋದವರನ್ನ ಬಂಧನ ಮಾಡುತ್ತೀರಿ, ಇದು ನ್ಯಾಯಾನಾ? ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಆಜಾನ್ ವಿರುದ್ಧವಾಗಿ ಹನುಮಾನ್ ಚಾಲೀಸಾ ಪಠಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರದಲ್ಲಿಂದು ಮಾತನಾಡಿದ ಅವರು, ಮಸೀದಿ ಮೇಲಿನ ಮೈಕ್ ತೆಗೆಸಲು ಸರಕಾರಕ್ಕೆ ಗಡವು ನೀಡಿದ್ದೇವು. ಆದರೆ, ಸರ್ಕಾರ ಈ ಬಗ್ಗೆ ಕ್ರಮ ಜರುಗಿಸಲಿಲ್ಲ.ಹೀಗಾಗಿ, ದೇವಾಲಯಗಳಲ್ಲಿ ಸುಪ್ರಭಾತಕ್ಕೆ ಚಾಲನೆ ನೀಡಿದ್ದೇವೆ ಮತ್ತು ಸರ್ಕಾರದ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದರು.
ಅದುವಲ್ಲದೇ ಮುಸ್ಲಿಂರ ಸೊಕ್ಕು, ಹಠದಿಂದ ಜನರಿಗೆ ತೊಂದರೆ ಆಗುತ್ತಿದೆ. ಇದು ತಾಲಿಬಾನ್ ಅಥವಾ ಪಾಕಿಸ್ತಾನ ಅಲ್ಲ. ಈ ರೀತಿ ಹಠ ಮಾಡುವುದು ಸರಿಯಲ್ಲ. ಸಂಘರ್ಷಕ್ಕೆ ನೀವೇ ಅವಕಾಶ ಮಾಡಿ ಕೊಡುತ್ತಿದ್ದೀರಿ. ಈ ಆಂದೋಲನ ಹತ್ತಿಕುವ ಕೆಲಸವನ್ನು ಸರಕಾರ ಮಾಡುತ್ತಿದೆ. ಮೈಕ್ ಹಾಕುವ ದೇವಸ್ಥಾನಗಳಿಗೆ ನೋಟಿಸ್ ನೀಡುತ್ತೀರಿ. ಮಸೀದಿಗೆ ಯಾಕೆ ಕೊಡಲ್ಲ ? ಸುಪ್ರಭಾತ ಹಾಕಲು ಹೋದವರನ್ನ ಬಂಧನ ಮಾಡುತ್ತೀರಿ. ಇದು ನ್ಯಾಯಾನಾ? ದೇವಸ್ಥಾನಗಳಲ್ಲಿ ಸುಪ್ರಭಾತಕ್ಕೆ ವಿರೋಧ ಮಾಡುತ್ತೀರಾ ? ಅದೇ ಮಸೀದಿಗಳಲ್ಲಿ ಆಜಾನ್ ಕೂಗಲು ಅವಕಾಶ ಕೊಡುತ್ತೀರಾ ? ಆಜಾನ್ಗೆ ಅವಕಾಶ ಕೊಟ್ಟು ಸುಪ್ರೀಂಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡುತ್ತಿದ್ದೀರಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಇನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಗೃಹ ಮಂತ್ರಿಯನ್ನು ಹೊಣೆಗಾರರನ್ನಾಗಿ ಹೈಕೋರ್ಟ್ ನಲ್ಲಿ ಕಂಟೆಮ್ಟ್ ಆಫ್ ಕೋರ್ಟ್ ಅರ್ಜಿ ದಾಖಲಿಸುತ್ತೇವೆ. ನಾಳೆಯಿಂದ ನಮ್ಮ ಹೋರಾಟ ಮತ್ತಷ್ಟು ಉಗ್ರವಾಗುತ್ತದೆ ಎಂದು ಮೈಸೂರಿನಲ್ಲಿ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.