ಹಾವೇರಿ : ಶೃಂಗಾರಗೊಂಡ ಎತ್ತುಗಳು.. ನಾ ಮುಂದೆ ತಾ ಮುಂದೆ ಅಂತಾ ಕೊಬ್ಬರಿ ಹೋರಿ ಹಿಡಿಯಲು ಮುಂದಾದ ಯುವಕರ ದಂಡು.. ಹೌದು, ಇದು ಹಾವೇರಿ ಹೊರವಲಯದ ಇಜಾರಿ ಲಕಮಾಪುರದಲ್ಲಿ ಕಂಡು ಬಂದ ದೃಶ್ಯ.ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಪ್ರಥಮ ಬಾರಿಗೆ ಯುವಕರು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ವರ್ಧೆ ಆಯೋಜಿಸಿದ್ದರು. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಶಿವಮೊಗ್ಗ, ಗದಗ ಸೇರಿ ವಿವಿಧ ಜಿಲ್ಲೆಯ ನೂರಾರು ಹೋರಿಗಳು ಭಾಗವಹಿಸಿದ್ದವು. ಜಿಂಕೆಯಂತೆ ಅತಿವೇಗದಲ್ಲಿ ಓಡುವ ಹೋರಿಗಳನ್ನು ಹಿಡಿಯಲು ಸಾವಿರಾರು ಯುವಕರು ಮುಗಿಬಿದ್ದರು.
ಎತ್ತುಗಳಿಗೆ ಬಲೂನ್, ಕೊಬ್ಬರಿ ಹಾಗೂ ರಿಬ್ಬನ್ ಕಟ್ಟಿ ಶೃಂಗಾರ ಮಾಡಿರುತ್ತಾರೆ. ಅಲ್ಲದೆ ಹೋರಿಗಳಿಗೆ ಕೊಬ್ಬರಿಯನ್ನ ಕಟ್ಟಿ ಅಖಾಡದಲ್ಲಿ ಬಿಡಲಾಗುತ್ತದೆ.ಎತ್ತುಗಳು ಜನಜಂಗುಳಿ ಮಧ್ಯೆ ಜಿಂಕೆಯಂತೆ ಜಿಗಿಯುತ್ತಾ ಅಖಾಡ ದಾಟಿ ಹೋಗುತ್ತವೆ. ಕೆಲವು ಯುವಕರು ಎತ್ತುಗಳನ್ನ ಹಿಡಿದು ಕೊಬ್ಬರಿಯನ್ನ ಕೀಳುತ್ತಾರೆ. ಇನ್ನು ಕೆಲವರು ಎತ್ತುಗಳನ್ನ ಹಿಡಿಯಲು ಹೋಗಿ ಬಿದ್ದು ಗಾಯಗೊಳ್ಳುತ್ತಾರೆ. ಕೆಲವು ಎತ್ತುಗಳು ಯಾರ ಕೈಗೂ ಸಿಗದೇ ಜಿಂಕೆಯಂತೆ ಓಡುತ್ತವೆ. ರೈತರು ತಮ್ಮ ಎತ್ತುಗಳನ್ನ ಓಡಿಸಿ ಸಂಭ್ರಮಿಸುತ್ತಾರೆ.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ನೂರಾರು ಹೋರಿಗಳು ಭಾಗವಹಿಸಿದ್ದವು..ಗೆದ್ದ ಹೋರಿಗಳಿಗೆ ಪ್ರಥಮ ಬಹುಮಾನ, ದ್ವೀತಿಯ ಬಹುಮಾನ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು.ಒಟ್ನಲ್ಲಿ ಗ್ರಾಮೀಣ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ಅಪಾಯಕಾರಿ ಆದರೂ ಈ ಸ್ಪರ್ಧೆಯನ್ನು ಬ್ಯಾನ್ ಮಾಡಬಾರದು ಅಂತಿದ್ದಾರೆ ಅಭಿಮಾನಿಗಳು.