ಮೈಸೂರು: ಮೇಣದ ಪ್ರತಿಮೆ ಮುಂದೆ ಫ್ಯಾಮಿಲಿ ಪಿಕ್. ತಮ್ಮೊಟ್ಟಿಗೆ ಇಲ್ಲ ಅಂದ್ರೂ ತಂದೆಯ ಮೇಣದ ಪ್ರತಿಮೆ ಮುಂಭಾಗ ಪುತ್ರನ ವಿವಾಹ. ಇಂತಹ ಅಪರೂಪದ ಮದುವೆಗೆ ಸಾಕ್ಷಿ ಆಗಿದ್ದು ಮೈಸೂರು ಜಿಲ್ಲೆಯ ದಕ್ಷಿಣ ಕಾಶಿ ನಂಜನಗೂಡು.ತಂದೆಯನ್ನು ಕಳೆದುಕೊಂಡಿದ್ದ ಚಿಕಮಗಳೂರು ಜಿಲ್ಲೆಯ ಅಜ್ಜಂಪುರದ ಡಾ.ಯತೀಶ್ ಹಾಗೂ ನಂಜನಗೂಡು ತಾಲೂಕಿನ ಮಲ್ಕುಂಡಿಯ ಶಿವಕುಮಾರ್ ಹಾಗೂ ಭ್ರಮರಾಂಬ ಪುತ್ರಿ ಡಾ.ಅಪೂರ್ವ ಮದುವೆಗೆ ಸಾಕ್ಷಿಯಾಗಿದ್ದು, ಯತೀಶ್ ತಂದೆ ರಮೇಶರ ಮೇಣದ ಪ್ರತಿಮೆ.
ಕಳೆದ ವರ್ಷ ಕೊರೋನಾದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಡಾ.ಯತೀಶರಿಗೆ ತಂದೆಯ ಕಣ್ಣ ಮುಂದೆಯೇ, ಮದುವೆಯಾಗುವ ಹಂಬಲವಿತ್ತಂತೆ.ಆದರೆ, ತಂದೆ ರಮೇಶ ಕೊರೋನಾದಿಂದ ಅಸುನೀಗಿದ್ದರು.ತಂದೆ ಇಲ್ಲದೆ ಮದುವೆಯಾಗುವುದು ಹೇಗೆ ಎಂಬ ಜಿಜ್ಞಾಸೆಗೆ ಬಿದ್ದ ಯತೀಶ್‌ಗೆ ನೆರವಾಗಿದ್ದು ಹೊಸ ತಂತ್ರಜ್ಞಾನ. ತಂದೆಯ ಪ್ರತಿರೂಪದ ಸಿಲಿಕಾನ್ ತಂತ್ರಜ್ಞಾನದ ಪ್ರತಿಮೆ ಮಾಡಿಸಿ, ಅದಕ್ಕೆ ಅಲಂಕಾರ ಮಾಡಿಸಿ ಪ್ಯಾಂಟು, ಕೋಟು ತೊಡಿಸಿ ಕಲ್ಯಾಣ ಮಂಟಪಕ್ಕೆ ತಂದು ಆ ಪ್ರತಿಮೆಯನ್ನು ಕುರ್ಚಿ ಮೇಲೆ ಪ್ರತಿಷ್ಠಾಪಿಸಿ ಪಕ್ಕದ ಕುರ್ಚಿಯಲ್ಲಿ ತಾಯಿ ಗಾಯತ್ರಿಯವರನ್ನು ಸಹ ಕೂರಿಸಿಕೊಂಡು ಮದುವೆಯಾಗಿದ್ದಾರೆ.ರಾತ್ರಿ ಶಾಸ್ತ್ರ ಮುಗಿಸಿ ಹಸೆಮಣೆ ಏರುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು.
ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪಕ್ಕೆ ಬಂದವರೆಲ್ಲರೂ ರಮೇಶರ ಮೇಣದ ಪ್ರತಿಮೆ ಕಂಡು ಅಚ್ಚರಿಗೊಂಡರು. ಯತೀಶ್ ಅನೇಕ ಕಡೆ ಪ್ರತಿಮೆ ಮಾಡಿಸಲು ಹುಡುಕಾಟ ನಡೆಸಿ ಕೊನೆಗೆ ಬೆಂಗಳೂರಿನಲ್ಲಿ ಸಿಲಿಕಾನ್ ತಂತ್ರಜ್ಞಾನ ಅಳವಡಿಸಿ ತಂದೆಯ ಗೊಂಬೆ ಮಾಡಿಸಿದ್ದಾರೆ. 5 ಲಕ್ಷ ಖರ್ಚು ಮಾಡಿ ತಯಾರಿಸಿರುವ ಪ್ರತಿಮೆ 10 ವರ್ಷ ಇದೇ ಸ್ಥಿತಿಯಲ್ಲಿರುತ್ತದೆ. ಒಂದೆಡೆ ಕೊರೋನಾ ಮಹಾಮಾರಿಯಿಂದ ತಂದೆ ಕಳೆದುಕೊಂಡ ದುಖಃ ಇದೆ. ಮದುವೆ ಎಂಬ ಪ್ರಮುಖ ಘಟ್ಟದಲ್ಲಿ ಮನೆಯ ಯಜಮಾನ ಇಲ್ಲ ಎನ್ನುವ ನೋವೂ ಇದೆ. ಇವುಗಳ ನಡುವೆ ಅವರ ಪ್ರತಿಬಿಂಬದ ಮುಂದೆ ಹೊಸ ದಾಂಪತ್ಯಕ್ಕೆ ಕಾಲಿಟ್ಟ ಸಮಾಧಾನ ಮಗನಿಗೆ ಇದೆ.