Wednesday, January 22, 2025

ಬಿಟೌನ್​ ‘ದಂಗಲ್’​​ನಲ್ಲಿ ರಾಕಿಭಾಯ್​ಗೆ ಭರ್ಜರಿ ಜಯ

ಕೆಜಿಎಫ್.. ಕನ್ನಡ ಚಿತ್ರರಂಗದ ದಂತಕಥೆ. ಇದ್ರಲ್ಲಿ ಎರಡು ಮಾತಿಲ್ಲ. ಇದೀಗ ಈ ಸಿನಿಮಾ ಮತ್ತೊಂದು ನೂತನ ದಾಖಲೆ ಮಾಡಿದೆ. ಬಾಲಿವುಡ್ ದಂಗಲ್​ನಲ್ಲಿ ಭರ್ಜರಿ ಜಯ ಸಾಧಿಸಿದ್ದಾನೆ ರಾಕಿಭಾಯ್. ಅಷ್ಟೇ ಅಲ್ಲ, ಸ್ಯಾಂಡಲ್​ವುಡ್ ಕಿಂಗ್ ಶಿವಣ್ಣ ಕೂಡ ಸಿನಿಮಾ ನೋಡಿ ಶಹಬ್ಬಾಶ್ ಎಂದಿದ್ದಾರೆ. ಚಾಪ್ಟರ್- 3 ಬಗ್ಗೆ ನೀಲ್​ಗೆ ಕಾಲ್ ಮಾಡ್ತೀನಿ ಅಂದಿದ್ದಾರೆ.

ಆಮೀರ್ ​ಖಾನ್​ನ ಹಿಂದಿಕ್ಕಿದ KGF ಮಾನ್​ಸ್ಟರ್ ಪಡೆ..!

ಬಾಹುಬಲಿ-2 ಅಗ್ರಸ್ಥಾನ, 2ನೇ ಶ್ರೇಯಾಂಕದಲ್ಲಿ KGF-2

ಬರೀ ಹಿಂದಿಯಲ್ಲೇ 400 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್

ರೆಕಾರ್ಡ್ಸ್.. ರೆಕಾರ್ಡ್ಸ್.. ರೆಕಾರ್ಡ್ಸ್​.. ಐ ಡೋಂಟ್ ಲೈಕ್ ರೆಕಾರ್ಡ್ಸ್. ಐ ಅವಾಯ್ಡ್. ಬಟ್ ರೆಕಾರ್ಡ್ಸ್ ಲೈಕ್ ಮೀ. ಇದು ಕೆಜಿಎಫ್ ರಾಕಿಭಾಯ್ ಸ್ಟೈಲ್​ನಲ್ಲೇ ಹೇಳಬಹುದಾದ ಫೇಮಸ್ ಡೈಲಾಗ್. ಹೀಗೆ ನಾವು ವಯಲೆನ್ಸ್ ಡೈಲಾಗ್​ನ ದಾಖಲೆಗಳಿಗೆ ಹೋಲಿಸಿ ಹೇಳೋದ್ರಲ್ಲಿ ತಪ್ಪೇ ಇಲ್ಲ. ಯಾಕಂದ್ರೆ ಕೆಜಿಎಫ್ ಮಾಡ್ತಿರೋ ದಾಖಲೆಗಳನ್ನ ನಮೂದಿಸೋಕೆ ಮತ್ತೊಂದು ಎಲ್​ಡೊರಾಡೋ ಪುಸ್ತಕವೇ ಬೇಕಾಗುತ್ತೆ. ಅಷ್ಟರ ಮಟ್ಟಿಗೆ ಪ್ರತೀ ದಿನ ಹೊಸ ಹೊಸ ರೆಕಾರ್ಡ್​ಗಳನ್ನ ಮಾಡ್ತಾ ಹೋಗ್ತಿದೆ.

ಕನ್ನಡ ಚಿತ್ರರಂಗದ ಮೈಲಿಗಲ್ಲು ಸಿನಿಮಾ ಕೆಜಿಎಫ್​, ನಮ್ಮ ಚಂದನವನದ ಮಟ್ಟಿಗೆ ಹಿಂದೆಂದೂ ಕಂಡು ಕೇಳರಿಯದ ರೇಂಜ್​ಗೆ ಚರಿತ್ರೆ ಸೃಷ್ಟಿಸಿಬಿಡ್ತು. ಅದು ಬರೀ ನಮ್ಮ ಇಂಡಸ್ಟ್ರಿಗೆ ಸೀಮಿತವಾಗದೆ ಭಾರತೀಯ ಚಿತ್ರರಂಗದಲ್ಲೂ ಎಲ್ಲರನ್ನ ಮೂಕವಿಸ್ಮಿತಗೊಳಿಸಿದ್ದು ಸುಳ್ಳಲ್ಲ. ಬಾಲಿವುಡ್ ಮಂದಿಯ ತಲೆ ಮೇಲೆ ಹೊಡೆಯುವಂತಹ ಸಿನಿಮಾ ಮಾಡಿ, ಕನ್ನಡಿಗರ ಗತ್ತು, ಗಮ್ಮತ್ತನ್ನ ಇಡೀ ವಿಶ್ವ ಸಿನಿದುನಿಯಾಗೆ ಸಾರಿದ್ರು ನೀಲ್, ಯಶ್ ಹಾಗೂ ವಿಜಯ್ ಕಿರಗಂದೂರು.

ಇಲ್ಲಿಯವರೆಗೆ ಸಾವಿರದ ಮುನ್ನೂರು ಕೋಟಿ ಗಳಿಸಿರೋ ಕೆಜಿಎಫ್-2, ಬಾಕ್ಸ್ ಆಫೀಸ್​ನಲ್ಲಿ ತನಗೆ ತಾನೇ ಸಾಟಿ ಅನ್ನೋ ಹಾಗೆ ತೂಫಾನ್​ನಂತೆ ಮುನ್ನುಗ್ಗುತ್ತಿದೆ. ಅದ್ರಲ್ಲೂ ಬಾಲಿವುಡ್ ಅಂಗಳದಲ್ಲಿ ಮಾತ್ರವೇ ಬರೋಬ್ಬರಿ 400 ಕೋಟಿ ಗಳಿಕೆಯಿಂದ ಆಮೀರ್​ಖಾನ್​ರ ದಂಗಲ್ ಕಲೆಕ್ಷನ್​ನ ಹಿಂದಿಕ್ಕಿದೆ. ಯೆಸ್. ಬಾಹುಬಲಿ 2 ಸಿನಿಮಾದ ಹಿಂದಿ ಗಳಿಕೆ 510.99 ಕೋಟಿ. ರಾಜಮೌಳಿಯ ಬಾಹುಬಲಿ-2 ಅಗ್ರಸ್ಥಾನದಲ್ಲಿದ್ರೆ, ಆಮೀರ್​ಖಾನ್​ರ ದಂಗಲ್ ಸಿನಿಮಾ 387.38 ಕೋಟಿಯಿಂದ ಎರಡನೇ ಶ್ರೇಯಾಂಕದಲ್ಲಿತ್ತು. ಆದ್ರೀಗ ದಂಗಲ್ ಚಿತ್ರದ ಬಿಟೌನ್ ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳೀಪಟ ಮಾಡಿರೋ ರಾಕಿಭಾಯ್, ಭಲೇ ಕನ್ನಡಿಗ ಅನಿಸಿಕೊಂಡಿದ್ದಾರೆ. ಅಲ್ಲಿಗೆ ಹಿಂದಿಯಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾಗಳ ಟಾಪ್ 2 ಲಿಸ್ಟ್​ನಲ್ಲಿ ಎರಕ್ಕೆ ಎರಡೂ ಸೌತ್ ದುನಿಯಾ ಚಿತ್ರಗಳೇ ಇರೋದು ಹೆಮ್ಮೆಯ ವಿಚಾರ.

ಕರುನಾಡಲ್ಲಿ ತನ್ನ ದಾಖಲೆ ತಾನೇ ಬ್ರೇಕ್ ಮಾಡಿದ ಯಶ್

140 Cr ಗಳಿಸಿದ್ದ ಚಾಪ್ಟರ್-1.. ಸೀಕ್ವೆಲ್ ಖಜಾನೆಗೆ 155 Cr

KGF ನೋಡಿದ ಶಿವಣ್ಣ ಚಾಪ್ಟರ್-3 ಬಗ್ಗೆ ಕ್ಯೂರಿಯಸ್..!

ಯಶ್ ನನ್ನ ತಮ್ಮ.. ನೀಲ್​ಗೆ ಕಾಲ್ ಮಾಡ್ತೀನಿ – ಲೀಡರ್

ಸ್ಯಾಂಡಲ್​ವುಡ್ ಲೀಡರ್ ಡಾ. ಶಿವರಾಜ್​ಕುಮಾರ್ ರೀಸೆಂಟ್ ಆಗಿ ಕೆಜಿಎಫ್ ಚಾಪ್ಟರ್-2 ಸಿನಿಮಾ ನೋಡಿದ್ರು. ಅವ್ರಿಗಾಗಿ ಒರಾಯನ್ ಮಾಲ್​ನ ಪಿವಿಆರ್ ಗೋಲ್ಡ್ ಕ್ಲಾಸ್​​ನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು ಚಿತ್ರತಂಡ. ಸಿನಿಮಾ ನೋಡಿದ ಬಳಿಕ ಮಾತನಾಡಿದ ಶಿವಣ್ಣ, ಮೇಕಿಂಗ್ ಬಗ್ಗೆ ಕೊಂಡಾಡಿದ್ರು. ಅಲ್ಲದೆ ಯಶ್ ನನ್ನ ತಮ್ಮನಿದ್ದಂತೆ ಎಂದರು. ನೀಲ್​ಗೆ ಕರೆಮಾಡಿ ಚಾಪ್ಟರ್-3 ಬಗ್ಗೆ ಮಾತಾಡ್ತೀನಿ ಎಂದರು.

ಸನ್ ಆಫ್ ಬಂಗಾರದ ಮನುಷ್ಯನ ಮಾತುಗಳನ್ನ ಕೇಳಿದ್ರಿ. ಆದ್ರೆ ಕರುನಾಡಲ್ಲಿ ಯಶ್ ಮಾಡಿದ್ದ ಸಾರ್ವಕಾಲಿಕ ದಾಖಲೆಯನ್ನ ಯಶ್ ಅವ್ರೇ ಮುರಿದಿರೋದು ಮತ್ತೊಂದು ಇಂಟರೆಸ್ಟಿಂಗ್ ವಿಚಾರ. ಹೌದು. ಕೆಜಿಎಫ್ ಮೊದಲ ಭಾಗ ಕರ್ನಾಟಕದಲ್ಲಿ 140 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಇದೀಗ 155 ಕೋಟಿ ಕಲೆಕ್ಷನ್​ನಿಂದ ಭಾಗ 2 ನೂತನ ದಾಖಲೆ ಬರೆದಿದೆ. ಅರ್ಥಾತ್ ಯಶ್ ದಾಖಲೆಯನ್ನ ಯಶ್ ಅವ್ರೇ ಬ್ರೇಕ್ ಮಾಡಿದ್ದಾರೆ. ಇದಕ್ಕಿಂತ ಖುಷಿ ಮತ್ತೇನಿದೆ ಅಲ್ಲವೇ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES