ಕಲಬುರಗಿ ಎಂದಾಕ್ಷಣ ಥಟ್ಟನೆ ನೆನಪಾಗೋದು ತೊಗರಿ ಕಣಜ. ಕೆಂಡದಂತಹ ಬಿಸಿಲು. ಅಂತಹ ಬಿರು ಬಿಸಿಲಿನ ನಡುವೆ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿಯವರ ಪಾದಯಾತ್ರೆ ಮುಂದುವರಿದಿದೆ. ಪ್ರತ್ಯೇಕ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 5ರಂದು ಆರಂಭವಾದ ಪಾದಯಾತ್ರೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಟೆಂಗಳಿ ಕ್ರಾಸ್ ಬಳಿ ಪ್ರಣವಾನಂದ ಸ್ವಾಮೀಜಿಗಳಿಗೆ ಅಲ್ಪಸಂಖ್ಯಾತರ ಮುಖಂಡರು ಸಹ ಬೆಂಬಲಿಸಿ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ಮಾತ್ನಾಡಿದ ಶ್ರೀಗಳು, ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇವೆ ಅಂತಾ ಕೇವಲ ಭರವಸೆ ನೀಡಿದ್ರೆ ಸಾಲದು. ಅಧಿಕೃತ ಪತ್ರದ ಮೂಲಕ ನಮಗೆ ತಲುಪಿಸಬೇಕು. ಇಲ್ಲವಾದ್ರೆ ಮೇ 11 ರ ನಂತರ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ರಾಜೇಶ್ ಗುತ್ತೇದಾರ್, ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಯನ್ನ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಯಾವುದೇ ಸೌಲಭ್ಯ ಸಿಗದೆ ಆರ್ಯ ಈಡಿಗ ಸಮಾಜದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಮೇಲೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ಅದೇನೇ ಇರಲಿ ರಾಜ್ಯದಲ್ಲಿ ಈಗಾಗಲೇ ಹಲವು ಸಮಾಜಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಯಮಗಳನ್ನ ಸ್ಥಾಪನೆ ಮಾಡಲಾಗಿದೆ. ನಮ್ಮ ಸಮಾಜಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಶ್ರೀ ಪ್ರಣವಾನಂದ ಸ್ವಾಮೀಜಿ ನಡೆಸ್ತಿರೋ ಪಾದಯಾತ್ರೆ, ಮೇ 11 ರಂದು ಮುಕ್ತಾಯವಾಗಲಿದೆ. ಅಷ್ಟರಲ್ಲಿ ಸರ್ಕಾರ ಆರ್ಯ ಈಡಿಗ ಸಮಾಜದ ಬೇಡಿಕೆ ಈಡೇರಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.