ಚಿತ್ರದುರ್ಗ : ಫಲವತ್ತಾಗಿ ಬೆಳೆದಿರೋ ಬಗೆ ಬಗೆಯ ತರಕಾರಿ. ಮನೆ ಮಂದಿಯೆಲ್ಲಾ ಸೇರಿ ಬೆಳೆಗಳನ್ನ ಸಂಸ್ಕರಿಸಿ ಮಾರುಕಟ್ಟೆಗೆ ಸಾಗಿಸುತ್ತಿರೋ ರೈತ ಕುಟುಂಬ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಹೊರವಲಯದಲ್ಲಿ ಮೆದೇಹಳ್ಳಿಯಲ್ಲಿ.
ಅಂದಹಾಗೆ, ಕೋಟೆ ಚಿತ್ರದುರ್ಗದಲ್ಲಿ ಈರುಳ್ಳಿ, ಮೆಕ್ಕೆಜೋಳ ಹಾಗು ಶೇಂಗಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದ್ರೆ ಸಾಮೂಹಿಕವಾಗಿ ಬೆಳೆಯೋ ಈ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಮೆದೇಹಳ್ಳಿ ರೈತ ಕುಟುಂಬ ನವೀಲ್ ಕೋಸು, ಬೀಟ್ರೋಟ್ ಬೆಳೆದಿದ್ದಾರೆ. ನಿರೀಕ್ಷೆಯಂತೆ ಫಲವತ್ತಾಗಿ ಬೆಳೆ ಬಂದಿದೆ. ಆದ್ರೆ, ಮಧ್ಯವರ್ತಿಗಳು ಮಾತ್ರ ಕೆಜಿಗೆ 5ರಿಂದ 6ರೂ ನಂತೆ ಖರೀದಿಸುತ್ತಿದ್ದಾರೆ. ಹೀಗಾಗಿ ತರಕಾರಿ ಬೆಳೆ ಕೂಡ ಕೈಹಿಡಿಯುತ್ತಿಲ್ಲ ಅಂತ ರೈತ ಕಂಗಾಲಾಗಿದ್ದಾನೆ.
ಇನ್ನೂ ಕಷ್ಟಪಟ್ಟು ಬೆಳೆದ ತರಕಾರಿ ಕೀಳಲು ಒಬ್ಬರಿಗೆ 300 ರಿಂದ 500 ರೂಪಾಯಿ ಕೂಲಿ ಕೊಡಬೇಕು. ಹೀಗಾಗಿ ಮನೆ ಮಂದಿಯೆಲ್ಲಾ ಸೇರಿ ಕೆಲಸ ಮಾಡಿದರೂ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ವಂತೆ. ರೈತರಿಂದ ಒಂದು ಕೆಜಿ ತರಕಾರಿಗೆ 5 ರೂಪಾಯಿ ಕೊಟ್ಟು ಖರೀದಿಸುವ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿ 25 ರಿಂದ 30ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕಷ್ಟ ಪಟ್ಟು ಬೆಳೆ ಬೆಳೆಯುವ ರೈತನಿಗೆ ನಷ್ಟ ಸಂಭವಿಸುತ್ತಿದ್ದು, ಸರ್ಕಾರ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ರೈತ ಮಹಿಳೆ ಆಗ್ರಹಿಸಿದ್ದಾರೆ.
ಪ್ರತೀ ವರ್ಷವೂ ರೈತರು ಬೆಳೆ ನಷ್ಟಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾಗುತ್ತಾರೆ. ಲಾಭದ ನಿರೀಕ್ಷೆಯಿಂದ ಹೊಸ ಹೊಸ ದಾರಿ ಹುಡುಕಿದರೂ ಏನೂ ಪ್ರಯೋಜನ ಆಗಿಲ್ಲ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು, ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ ರೈತನ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಯೋಜನೆ ರೂಪಿಸಬೇಕಿದೆ.