ಬೆಂಗಳೂರು : ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ ಪ್ರಾರಂಭಿಸಿರುವ ‘ಇ-ಇಂಡೆಂಟಿಂಗ್’ ವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ಗಳ ಒಕ್ಕೂಟವು ಒಂದು ದಿನ ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡದಿರಲು ನಿರ್ಧರಿಸಿದೆ.
ಇಂದಿನಿಂದ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಎಲ್ಲಾ ಮದ್ಯ ಮಳಿಗೆಗಳಿಂದ ಒಂದೇ ಸಲ ಮದ್ಯ ಖರೀದಿ ನಿಲ್ಲಿಸದೆ ಶುಕ್ರವಾರದಿಂದ ವಿಭಾಗವಾರು ಖರೀದಿ ಬಹಿಷ್ಕಾರ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.
ಇಂದು ಕಲಬುರಗಿ ವಿಭಾಗದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಎಲ್ಲಾ ರೀತಿಯ ಮದ್ಯ ಮಳಿಗೆಯವರು ಕೆಎಸ್‌ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡದೆ ಪ್ರತಿಭಟಿಸಬೇಕು ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸೂಚನೆ ನೀಡಿದೆ.
ಇನ್ನು ಮೇ 10ರಂದು ಮಂಗಳವಾರ, ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ ಹಾಗೂ ಹೊಸಪೇಟೆ ವಿಭಾಗದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ , ಮೇ 12ರಂದು ಗುರುವಾರ ಮೈಸೂರು ಹಾಗೂ ಮಂಗಳೂರು ವಿಭಾಗಗಳಲ್ಲಿ, ಮೇ 17ರಂದು ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳ ಕೆಎಸ್‌ಬಿಸಿಎಲ್ ಡಿಪೋಗಳಲ್ಲಿ, ಮೇ 19ರಂದು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಡಿಪೋಗಳಿಂದ ಮದ್ಯ ಹಾಗೂ ಬಿಯರ್ ಖರೀದಿ ಮಾಡದಂತೆ ಸೂಚಿಸಲಾಗಿದೆ.